ಮಡಿಕೇರಿ, ಫೆ. ೨ : ಕೂಡುಮಂಗಳೂರು ಶ್ರೀ ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಸಂಘದ ಮಾಜಿ ನಿರ್ದೇಶಕರು ಹಾಗೂ ಸದಸ್ಯರು ಆರೋಪ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ಸಂಘದ ಸದಸ್ಯ ಕಾಂತರಾಜ್, ಪ್ರಸಕ್ತ ಆಡಳಿತ ಮಂಡಳಿ ಸಂಘದ ಸದಸ್ಯರ ಮಾತಿಗೆ ಮನ್ನಣೆ ನೀಡದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಮಹಾಸಭೆಯಲ್ಲಿ ವಿರೋಧಿಸಿದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರೈತ ವಿರೋಧಿ ನಡೆಯನ್ನು ಆಡಳಿತ ಮಂಡಳಿ ಅನುಸರಿಸುತ್ತಿದೆ. ಇದರಿಂದ ಹಣವೂ ದುರುಪಯೋಗವಾಗುತ್ತಿದ್ದು, ಇದನ್ನು ಪ್ರಶ್ನಿಸಿ ದಾಖಲೆ ನೀಡುವಂತೆ ಒತ್ತಾಯಿಸಿದರೂ ಯಾವುದೇ ಸ್ಪಂದನ ದೊರೆಯುತ್ತಿಲ್ಲ ಎಂದು ದೂರಿದರು.

ಸೀಗೆಹೊಸೂರು ಗ್ರಾಮದಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ರೂ. ೬೦ ಲಕ್ಷ ಹಣ ನೀಡಿ ೨ ಎಕರೆ ಜಾಗವನ್ನು ಆಡಳಿತ ಮಂಡಳಿ ಖರೀದಿಸಿದೆ. ಜೊತೆಗೆ ಜಾಗದ ಸರ್ವೆ ಮಾಡದೆ, ಸಮರ್ಪಕವಾಗಿ ಅಳತೆ ಮಾಡದೆ ಖರೀದಿಸಲಾಗಿದೆ. ಈ ಜಾಗದಿಂದ ಯಾವುದೇ ಲಾಭ ಇಲ್ಲ. ಗುತ್ತಿಗೆಗೆ ಜಾಗ ನೀಡಿದರೂ ದೊಡ್ಡ ಮಟ್ಟದ ಮೊತ್ತ ಬರುವುದಿಲ್ಲ ಎಂದು ಹೇಳಿದ ಅವರು, ಕಲ್ಯಾಣ ಮಂಟಪ ನಿರ್ಮಿಸಲು ಗೋದಾಮು ಹಾಗೂ ರೈತ ಭವನವನ್ನು ಕೆಡವಲಾಗಿದೆ. ಕಟ್ಟಡವನ್ನು ಕೆಡವಲು ಮಹಾಸಭೆಯಲ್ಲಿ ವಿರೋಧಿಸಲಾಗಿತ್ತು. ಹಳೆಯ ಭವನವನ್ನು ನವೀಕರಿಸುವಂತೆ ನಿರ್ಧರಿಸಲಾಗಿತ್ತು. ಆದರೆ, ನಡಾವಳಿಯನ್ನು ತಿರುಚಿ ಕಟ್ಟಡ ನೆಲಸಮ ಮಾಡಿ ಅವೈಜ್ಞಾನವಿಕವಾಗಿ ಮಂಟಪ ನಿರ್ಮಿಸಲಾಗಿದೆ. ಇದಕ್ಕೆ ಸ್ಥಳೀಯರು ಆಕ್ಷೇಪ ಸಲ್ಲಿಸಿದ್ದಾರೆ. ಇದರಿಂದ ಸಂಘಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಈ ಬಗ್ಗೆ ಮಹಾಸಭೆಯಲ್ಲಿ ಚರ್ಚಿಸಲು ಮುಂದಾದರೆ ಅಧಿಕಾರದಲ್ಲಿರುವವರು ಬೆಂಬಲಿಗರ ಮೂಲಕ ಗಲಾಟೆ ನಡೆಸಿ ಸಭೆಯ ದಿಕ್ಕು ತಪ್ಪಿಸುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಾಜಿ ನಿರ್ದೇಶಕ ಕೆ.ಕೆ. ಭೋಗಪ್ಪ ಮಾತನಾಡಿ, ಪ್ರಸಕ್ತ ಆಡಳಿತ ಮಂಡಳಿಯ ಕಾರ್ಯವೈಖರಿಯಿಂದ ನೊಂದು ತಾನು ಸೇರಿದಂತೆ ಇಬ್ಬರು ರಾಜೀನಾಮೆ ಸಲ್ಲಿಸಿ ಹೊರನಡೆದಿದ್ದೇವೆ. ತಳಮಟ್ಟದಿಂದ ನಾವು ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಇಂದಿನ ಆಡಳಿತ ಮಂಡಳಿ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಜಾಗ ಖರೀದಿ, ಮಂಟಪ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಸಂಘದ ಜಾಗ ಒತ್ತುವರಿ ಮಾಡಿಕೊಂಡವರಿಗೆ ದಾನಪತ್ರದ ಮೂಲಕ ಜಾಗ ನೀಡಲಾಗಿದೆ. ದಾಖಲೆ ಕೇಳಿದರೆ ನೀಡುವುದಿಲ್ಲ. ಸಂಬAಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಮಾಜಿ ನಿರ್ದೇಶಕ ಟಿ.ಕೆ. ವಿಶ್ವನಾಥ್, ರೈತ ಮುಖಂಡ ದಾಮೋದರ್ ಹಾಜರಿದ್ದರು.