ಶ್ರೀಮಂಗಲ, ಫೆ. ೨: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಆಸಕ್ತಿಯನ್ನು ಪೋಷಕರು ಮತ್ತು ಶಿಕ್ಷಕರು ಗುರುತಿಸಿ ಅದಕ್ಕೆ ಪೂರಕವಾಗಿ ಉತ್ತೇಜನ ನೀಡಿದರೆ ಅದರಲ್ಲಿ ಯಶಸ್ಸು ಕಾಣುತ್ತಾರೆ. ಅದು ಹೊರತುಪಡಿಸಿ ಆಸಕ್ತಿ ಇಲ್ಲದ ಕ್ಷೇತ್ರದತ್ತ ದೂಡಬಾರದು ಎಂದು ರಾಜ್ಯ ಸರಕಾರದ ಮಾಜಿ ಅಡ್ವಕೇಟ್ ಜನರಲ್ ಮತ್ತು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಪೊನ್ನಂಪೇಟೆಯ ನಿನಾದ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮತ್ತೋರ್ವ ಮುಖ್ಯ ಅತಿಥಿ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಡಾ. ಬಿ.ಪಿ. ಕಾರ್ಯಪ್ಪ ಅವರು ಮಾತನಾಡಿ, ಮಕ್ಕಳಿಗೆ ಶಿಸ್ತು ತುಂಬಾ ಮುಖ್ಯ, ಶಿಸ್ತಿನಿಂದ ಜೀವನದ ವ್ಯಕ್ತಿತ್ವ ರೂಪಿಸಿಕೊಳ್ಳಲು ಮತ್ತು ಯಶಸ್ಸುಗಳಿಸಲು ಸಾಧ್ಯ ಎಂದರು.
ನಿನಾದ ವಿದ್ಯಾಸಂಸ್ಥೆ ಅಧ್ಯಕ್ಷೆ ಚೇಂದಿರ ನಿರ್ಮಲಾ ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾದ ಹುದಿಕೇರಿ ಲಿಟಲ್ ಫ್ಲವರ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಜ್ಯೋತಿ ಸತೀಶ್, ಕೆ. ಚೆನ್ನಯ್ಯ, ಸಂಸ್ಥೆಯ ಕಾರ್ಯದರ್ಶಿ ಚೇಂದಿರ ಬೋಪಣ್ಣ ಉಪಸ್ಥಿತರಿದ್ದರು.
ವಿದ್ಯಾಸಂಸ್ಥೆ ಆಡಳಿತಾಧಿಕಾರಿ ನಾಗೇಶ್ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.