ಸೋಮವಾರಪೇಟೆ, ಫೆ. ೨: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪುದಿಯತಂಡ ಗಣಪತಿ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿ ನೆಹರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈವರೆಗೆ ಅಧ್ಯಕ್ಷರಾಗಿದ್ದ ಮಹೇಶ್ ತಿಮ್ಮಯ್ಯ ಹಾಗೂ ಉಪಾಧ್ಯಕ್ಷೆಯಾಗಿದ್ದ ಮಂಜುಳಾ ಸುಬ್ರಮಣಿ ಅವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಗಣಪತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ನೆಹರು ಅವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.
೧೪ ಸದಸ್ಯ ಬಲದ ಚೌಡ್ಲು ಗ್ರಾ.ಪಂ.ನಲ್ಲಿ ೧೨ ಮಂದಿ ಬಿಜೆಪಿ ಬೆಂಬಲಿತರಿದ್ದು, ಉಳಿದ ಈರ್ವರಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರಿದ್ದಾರೆ. ಪ್ರಥಮ ಅವಧಿಯ ಆಯ್ಕೆ ಸಂದರ್ಭ ಏರ್ಪಟ್ಟಿದ್ದ ಒಪ್ಪಂದದAತೆ ಯಾವುದೇ ಗೊಂದಲವಿಲ್ಲದೆ ನೂತನ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆ ನಡೆಯಿತು. ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಪ್ರಮುಖರಾದ ಶಂಭು ಸಂಪತ್, ಮಹೇಶ್ ಬಿ.ಆರ್., ಅಶೋಕ್ ಹೆಚ್.ಎನ್. ಸೇರಿದಂತೆ ಇತರರು ಇದ್ದರು.