ವರದಿ: ಈಶಾನ್ವಿ
ವೀರಾಜಪೇಟೆ, ಫೆ.೨: ಕೊಡಗು ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಕಾಫಿ ಹೂಗಳ ಘಮಲೇ ಹೆಚ್ಚಾಗಿದೆ. ಕಾಫಿತೋಟದ ಹಸಿರ ರಾಶಿಯಲ್ಲಿ ಶ್ವೇತವರ್ಣದ ಕಾಫಿ ಹೂಗಳು ಸುಗಂಧ ಸೂಸುತ್ತಿದ್ದರೂ, ಕಾಫಿ ಬೆಳೆಗಾರರ ಕಣ್ಣಲ್ಲಿ ಮಾತ್ರ ನೀರು ತರಿಸುತ್ತಿದೆ. ಮುಂದಿನ ಬಾರಿಗೆ ಕಾಫಿ ಫಸಲು ಗಿಡದಲ್ಲಿ ನಿಲ್ಲೋದೇ ಅನುಮಾನ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಾಧಾರಣವಾಗಿ ಏಪ್ರಿಲ್-ಮೇ ತಿಂಗಳಿನಲ್ಲಿ ಕಾಫಿ ತೋಟದಲ್ಲಿ ಕಂಡು ಬರುತ್ತಿದ್ದ ಕಾಫಿ ಹೂಗಳು ಇದೀಗ ಅವಧಿಗೆ ಮುನ್ನವೇ ಅರಳಿವೆ. ಹವಾಮಾನ ವೈಪರೀತ್ಯದಿಂದ ಕಳೆದ ಆರು ದಿನಗಳ ಹಿಂದೆ ಕೊಡಗು ಜಿಲ್ಲೆಯಾದ್ಯಂತ ಮಳೆಯ ಸಿಂಚನವಾಗಿತ್ತು. ಇದರ ಎಫೆಕ್ಟ್ನಿಂದ ಕಾಫಿ ಹಣ್ಣನ್ನು ಕುಯಿಲು ಮಾಡುವ ಈ ಸಂದರ್ಭದಲ್ಲಿ ಕಾಫಿ ಗಿಡದಲ್ಲಿ ಹೂ ಅರಳಿ ನಿಂತಿದೆ. ಇದರಿಂದ ಕುಯ್ಯೋಕೆ ಇರೋ ಕಾಫಿ ಹಣ್ಣಿಗೂ ತೊಂದರೆಯಾಗುತ್ತಿದ್ದು, ಜೊತೆಗೆ ಈಗ ಅರಳಿರುವ ಕಾಫಿ ಹೂ ಮುಂದೆ ಗಿಡದಲ್ಲಿ ನಿಲ್ಲುವುದಿಲ್ಲ. ಜುಲೈ, ಸೆಪ್ಟೆಂಬರ್ ವೇಳೆಗೆ ಉಳಿದ ಫಸಲು ಕೂಡ ಸಂಪೂರ್ಣ ಉದುರಿ ಹೋಗುತ್ತದೆ. ಹಾಗಾಗಿ ಮುಂದಿನ ಬಾರಿಯ ಫಸಲಿಗೂ ಅಕಾಲಿಕ ಮಳೆ ಪೆಟ್ಟು ಕೊಟ್ಟಿದೆ.
೨೦೨೨ರಲ್ಲಿ ಮಹಾಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕಾಫಿಗೆ ಹಾನಿಯಾಗಿದ್ದು, ಫಸಲು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಕಾಫಿ ಫಸಲು ಕಳೆದುಕೊಂಡು ಆತಂಕದಲ್ಲಿದ್ದ ಕಾಫಿ ಬೆಳೆಗಾರನಿಗೆ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಾಫಿ ತೋಟದಲ್ಲಿ ಮಲ್ಲಿಗೆ ಚೆಲ್ಲಿದ ಹಾಗೆ ಕಂಗೊಳಿಸುತ್ತಿರುವ ಕಾಫಿ ಹೂ, ಸಣ್ಣ-ಪುಟ್ಟ ರೈತರಿಗೆ ಪೀಕಲಾಟ ತಂದಿರುವುದAತೂ ಸುಳ್ಳಲ್ಲ.
ಕಾಫಿ ಫಸಲನ್ನು ಕೊಯ್ಲು ಮಾಡಿ ಆ ಬಳಿಕ ಮುಂದಿನ ಫಸಲಿಗೆ ಮುಂದಾಲೋಚನೆಯಿAದ ನೀರು ಹಾಯಿಸೋದು ವಾಡಿಕೆ. ಕಾಫಿ ಕೊಯ್ಲು ಮಾಡಿ, ಫೆಬ್ರವರಿ ತಿಂಗಳ ಕೊನೆಯಲ್ಲಿ ನೀರು ಹಾಯಿಸಿದ್ರೆ ಮುಂದಿನ ಫಸಲಿನ ಮೊದಲ ಹಂತವಾಗಿ ಕಾಫಿ ಹೂಗಳು ಅರಳುತ್ತವೆ.
ಮಳೆ ತಂದಿಟ್ಟ ಸಮಸ್ಯೆಗಳು
ಮಳೆಯಿಂದ ಒಂದು ಕಡೆ ಕಾಫಿಯ ಹಣ್ಣುಗಳು ಉದುರಿ ಹೋದರೆ, ಇನ್ನೊಂದೆಡೆ ಕೊಯ್ಲು ಮಾಡಿ ಒಣಹಾಕಿದ ಫಸಲು ಕೊಚ್ಚಿ ಹೋಗಿತ್ತು.
ಹೂವನ್ನು ಉಳಿಸಿಕೊಳ್ಳೊದೇ ಸವಾಲು!
ಇನ್ನೂ ಕಾಫಿ ಕೊಯ್ಲು ಶೇ.೫೦ಕ್ಕೂ ಹೆಚ್ಚು ಬಾಕಿಯಿದೆ. ಕೊಯ್ಲು ಮಾಡುವ ವೇಳೆಯಲ್ಲಿ ಕಾಫಿ ಹೂವುಗಳು ಉದುರಿದರೆ ಮುಂದಿನ ಫಸಲಿಗೆ ಪೆಟ್ಟು ಬೀಳುತ್ತದೆ. ಕಳೆದ ಬಾರಿಯ ಫಸಲನ್ನ ಉಳಿಸಿಕೊಳ್ಳಬೇಕೋ? ಮುಂದಿನ ಬಾರಿಯ ಫಸಲಿಗೂ ಪೆಟ್ಟು ಬೀಳದಂತೆ ಹೂಗಳನ್ನ ಕಾಪಾಡಿಕೊಳ್ಳಬೇಕೋ? ಎಂಬುದೇ ಬೆಳೆಗಾರರಿಗೆ ಎದುರಾಗಿರುವ ಗೊಂದಲ.
ಕಾರ್ಮಿಕರ ಕೊರತೆ
ಇಷ್ಟೆಲ್ಲಾ ಸಮಸ್ಯೆ ಮಧ್ಯೆ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆ ಕಾಡತೊಡಗಿದೆ. ಎಲ್ಲರೂ ಒಂದೇ ಬಾರಿ ಕಾಫಿ ಕೊಯ್ಲಿನಲ್ಲಿ ತೊಡಗಿಕೊಂಡಿದ್ದರಿAದ ಕಾರ್ಮಿಕರು ಸಿಗದಂತಾಗಿದೆ. ಕಾಫಿ ಕೊಯ್ಲು ಮಾಡುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ.
ಜೇನು ಹುಳುಗಳೂ ಇಲ್ಲ
ಈ ಬಾರಿ ಅರಳಿದ ಕಾಫಿ ಕುಸುಮಗಳನ್ನು ಮುತ್ತಿಕೊಳ್ಳೋಕೆ ಜೇನು ಹುಳುಗಳೇ ಇಲ್ಲವಾಗಿವೆೆ. ಕಾಫಿ ತೋಟದಲ್ಲಿ ಹೂ ಅರಳಿ ನಿಂತಾಗ ಎಲ್ಲೆಡೆ ಜೇನಿನ ಶಬ್ದ ಕಿವಿಗೆ ರಾಚುತ್ತಿತ್ತು. ಈಗ ಜೇನುಗಳ ಸುಳಿವೇ ಇಲ್ಲ. ಅಕಾಲಿಕ ಮಳೆಯ ಫಲವಾಗಿ ಅರಳಿರೋ ಕಾಫಿ ಕುಸುಮಗಳೂ ಜೇನಿಗೆ ಬೇಡವಾಗಿದೆಯೋ? ಅಥವಾ ಜೇನು ಕಾಫಿ ತೋಟದ ಕಡೆ ಬರಲು ಇದು ಸೂಕ್ತ ಸಮಯ ಅಲ್ಲವೋ? ಎಂಬುದು ತಿಳಿಯದು. ಇದರಿಂದ ಕಾಫಿ ಹೂ ಪರಾಗಸ್ಪರ್ಶ ಸರಿಯಾಗಿ ಆಗದೇ ಫಸಲು ಕೈ ಕೊಡುತ್ತದೆ ಎನ್ನುತ್ತಾರೆ ಕಾಫಿ ಬೆಳೆಗಾರರು. ಅಲ್ಲದೇ ಅವಧಿಗೂ ಮುನ್ನವೇ ಅರಳಿರೋ ಹೂಗಳಿಂದ ಕಾಫಿ ಗಿಡಗಳಿಗೆ ಸರಿಯಾಗಿ ವಿಶ್ರಾಂತಿ ಸಿಗುತ್ತಿಲ್ಲ.
ಜನವರಿ ಕೊನೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಕಾಫಿ ಕೊಯ್ಲು ಮುಗಿದು ಮಾರ್ಚ್ ಮೊದಲ ವಾರದಲ್ಲಿ ಕಾಫಿ ಹೂಗಳು ಅರಳಿದರೆ ಮುಂದಿನ ಫಸಲು ಉತ್ತಮವಾಗಿರುತ್ತದೆ ಅನ್ನೋದು ಕಾಫಿ ಬೆಳೆಗಾರರ ಅಭಿಪ್ರಾಯ.
ಒಟ್ಟಿನಲ್ಲಿ ಈ ಅಕಾಲಿಕ ಮಳೆ ಈ ಬಾರಿಯ ಫಸಲನ್ನ ಕಿತ್ತುಕೊಂಡಿದಲ್ಲದೆ ಅವಧಿಗೂ ಮುನ್ನವೇ ಅರಳಿರೋ ಕಾಫಿ ಕುಸುಮಗಳು ಮುಂದಿನ ಬಾರಿಯ ಫಸಲಿಗೂ ಆತಂಕ ತಂದೊಡ್ಡಿವೆ.