ಸುAಟಿಕೊಪ್ಪ, ಫೆ. ೧: ಸುಂಟಿಕೊಪ್ಪ ಸಾಮ್ರಾಟ್ ಯುವಕ ಸಂಘದ ವತಿಯಿಂದ ಗಣರಾ ಜ್ಯೋತ್ಸವದ ಅಂಗವಾಗಿ ಪುರುಷರ ಮುಕ್ತ ವಾಲಿಬಾಲ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ವಿಜೇತರಾಗಿ ಸಾಮ್ರಾಟ್ ತಂಡ ಹಾಗೂ ದ್ವಿತೀಯ ಬಹುಮಾನ ಹೊಸತೋಟ ತಂಡ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಅವರು, ನಾವು ಎಷ್ಟೇ ಕೋಟಿ ಸಂಪಾದಿಸಿ ಕ್ರೋಢೀಕರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ನಮ್ಮ ಸುತ್ತಮುತ್ತಲಿನ ಜನತೆಯಲ್ಲಿ ಉತ್ತಮ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯ ಹೊಂದಿದಲ್ಲಿ ಜೀವಿಸಿದ ಜೀವಿತ ಕಾಲಕ್ಕೆ ಅರ್ಥ ಬರಲು ಸಾಧ್ಯವೆಂದು ಹೇಳಿದರು.
ಸಮಾರಂಭದಲ್ಲಿ ಸುಂಟಿಕೊಪ್ಪ ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಗೌತಮ್ ಮೈನಿ, ಗ್ರಾ.ಪಂ. ಸದಸ್ಯರಾದ ಆಲಿಕುಟ್ಟಿ, ಪಿ.ಎಫ್. ಸಬಾಸ್ಟೀನ್, ಪಿ.ಆರ್. ಸುನಿಲ್ ಕುಮಾರ್ ಕ್ರೀಡೆ ಹಾಗೂ ದಿನದ ಮಹತ್ವದ ಕುರಿತು ಮಾತನಾಡಿದರು.
ವಿವಿಧ ಭಾಗಗಳಿಂದ ೧೨ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯಾವಳಿಯು ಹೊಸತೋಟ ಹಾಗೂ ಆತಿಥೇಯ ಸಾಮ್ರಾಟ್ ತಂಡಗಳ ನಡುವೆ ನಡೆಯಿತು. ಆತಿಥೇಯ ಸಾಮ್ರಾಟ್ ತಂಡವು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಶಿಕ್ಷಣ, ಕ್ರೀಡೆ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ನೆನಪಿನ ಕಾಣಿಕೆ ನೀಡಿ ಅತಿಥಿಗಳು ಸನ್ಮಾನಿಸಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಗ್ರಾ.ಪಂ. ಸದಸ್ಯರುಗಳಾದ ಶಬೀರ್, ವನಿತಾ, ಕಂಬಿಬಾಣೆ ಗ್ರಾ.ಪಂ. ಸದಸ್ಯೆ ಚಂದ್ರಾವತಿ ಹಾಗೂ ಸಾಮ್ರಾಟ್ ಯೂತ್ ಕ್ಲಬ್ ಅಧ್ಯಕ್ಷ ಈಶ್ವರ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.