ಮಡಿಕೇರಿ, ಫೆ. ೧: ಹಿಂದೂ ಪರ ಸಂಘಟನೆಯ ಪ್ರಮುಖರಿಬ್ಬರನ್ನು ಗಡಿಪಾರು ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತವನ್ನು ಕೋರಿದ್ದು, ಈ ಹಿನ್ನೆಲೆ ತಾ. ೨ ರಂದು (ಇಂದು) ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಇಬ್ಬರು ಹಾಜರಾಗಿ ಗಡಿಪಾರು ಏಕೆ ಮಾಡಬಾರದು ಎಂದು ಸೂಕ್ತ ಕಾರಣ ತಿಳಿಸುವಂತೆ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ ನೋಟೀಸ್ ಮೂಲಕ ಆದೇಶಿಸಿದ್ದಾರೆ.
ಹಿಂದೂಪರ ಸಂಘಟನೆ ಮುಖಂಡ, ನಗರಸಭೆಯ ನಾಮನಿರ್ದೇಶಿತ ಸದಸ್ಯರೂ ಆಗಿರುವ ಕವನ್ ಕಾವೇರಪ್ಪ ಹಾಗೂ ತಾಳತ್ತಮನೆ ನಿವಾಸಿ ವಿನಯ್ ಕುಮಾರ್ ಅವರಿಗೆ ನೋಟೀಸ್ ನೀಡಲಾಗಿದ್ದು, ಈರ್ವರು ನೋಟೀಸ್ ಸ್ವೀಕರಿಸಿದ್ದಾರೆ.
ಕವನ್ ಕಾವೇರಪ್ಪ ಅವರಿಗೆ ಬಂದ ನೋಟೀಸ್‌ನಲ್ಲಿ ಮಡಿಕೇರಿ ನಗರ ಠಾಣೆಯಲ್ಲಿ ೨ ಪ್ರಕರಣ ಕವನ್ ಕಾವೇರಪ್ಪ ವಿರುದ್ಧ ದಾಖಲಾಗಿದ್ದು, ಈ ಪೈಕಿ ಒಂದು ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ. ೧ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅದಲ್ಲದೆ ರೌಡಿ ಶೀಟರ್ ಪಟ್ಟಿಯಲ್ಲಿದ್ದಾರೆ. ಸಮಾಜದಲ್ಲಿ ಶಾಂತಿ ಭಂಗಕ್ಕೆ ಕವನ್ ಕಾರಣವಾಗುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಡಿಕೇರಿಗೆ ಬಂದ ಸಂದರ್ಭ ಕಪ್ಪುಪಟ್ಟಿ ಪ್ರದರ್ಶನ ಅಲ್ಲದೆ ಮೊಟ್ಟೆ ಎಸೆದಿದ್ದಾರೆ.
(ಮೊದಲ ಪುಟದಿಂದ) ಈ ವಿರುದ್ಧ ಪ್ರಕರಣವೂ ದಾಖಲಾಗಿದೆ ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ.
ಭಜರಂಗದಳ ಪ್ರಮುಖ ವಿನಯ್ ಸ್ವೀಕರಿಸಿದ ನೋಟೀಸ್‌ನಲ್ಲಿ ೫ ಪ್ರಕರಣಗಳ ಪೈಕಿ ೩ ಪ್ರಕರಣದಲ್ಲಿ ಖುಲಾಸೆಗೊಂಡಿದ್ದು, ೨ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈತ ಕಮ್ಯೂನಲ್ ಗೂಂಡ ಪಟ್ಟಿಯಲ್ಲಿದ್ದು, ಕೋಮು ಸಂಘರ್ಷ ಸೃಷ್ಟಿಸುವ ಕೆಲಸ ಈತನಿಂದ ಆಗುತ್ತಿದೆ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣಗಳ ಆಧಾರದಲ್ಲಿ ಇಬ್ಬರನ್ನು ಗಡಿಪಾರು ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೋರಿದ್ದು, ಗಡಿಪಾರು ಏಕೆ ಮಾಡಬಾರದು ಎಂದು ಉಪವಿಭಾಗಧಿಕಾರಿ ನ್ಯಾಯಾಲಯಕ್ಕೆ ಹಾಜರಾಗಿ ಬೆಳಿಗ್ಗೆ ೧೧ ಗಂಟೆಗೆ ಸೂಕ್ತ ಕಾರಣಗಳನ್ನು ನೀಡುವಂತೆ ನೋಟೀಸ್ ಮೂಲಕ ಅಧಿಕಾರಿ ಸೂಚಿಸಿದ್ದಾರೆ.
ಹಿಂ.ಜಾ.ವೇ. ಖಂಡನೆ
ಇಬ್ಬರು ಹಿಂದೂ ಪರ ಕಾರ್ಯಕರ್ತರಿಗೆ ಗಡಿಪಾರು ಮಾಡಲು ಸೂಚಿಸಿ ಜಿಲ್ಲಾಡಳಿತ ಎ.ಸಿ. ಮೂಲಕ ಕಾರಣ ಕೇಳಿ ನೋಟೀಸ್ ಜಾರಿ ಮಾಡಿರುವುದನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸಿದೆ. ದೇಶದ್ರೋಹಿ ಕೃತ್ಯ, ಹಿಂದೂಗಳ ಮೇಲೆ ಬಾಂಬ್ ಹಾಕಲು ಸಂಚು ರೂಪಿಸಿದವರು, ಗೋ ಹತ್ಯೆ, ಮಾದಕ ವಸ್ತುಗಳ ಸರಬರಾಜು, ಮಾಡುವವರು ಸೇರಿದಂತೆ ಇನ್ನಿತರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಆರೋಪಿಗಳನ್ನು ಸುಮ್ಮನೆ ಬಿಟ್ಟು ಹಿಂದೂ ಕಾರ್ಯಕರ್ತರನ್ನೇ ಗುರಿ ಮಾಡಿ ಗಡಿಪಾರು ಹೆಸರಿನಲ್ಲಿ ಬೆದರಿಸುವ, ಮಾನಸಿಕವಾಗಿ ಕುಗ್ಗಿಸುವ ಯತ್ನವಾಗುತ್ತಿದೆ ಎಂದು ದೂರಿದರು. ಇದನ್ನು ವಿರೋಧಿಸಿ ವಿವಿಧ ಸಂಘಟನೆಗಳ ಸಹಭಾಗಿತ್ವದೊಂದಿಗೆ ತೀವ್ರ ಹೋರಾಟ ನಡೆಸಿ ತೊಂದರೆಗೊಳಗಾದ ಹಿಂದೂ ಸಾಮಾಜಿಕ ಕಾರ್ಯಕರ್ತರಿಗೆ ನ್ಯಾಯ ದೊರಕಿಸುವುದಾಗಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್ ಎಚ್ಚರಿಸಿದ್ದಾರೆ.