ಮಡಿಕೇರಿ, ಜ. ೩೦: ಕೊಡಗು ಜಿಲ್ಲಾ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾದ ಭಿನ್ನಮತದಿಂದ ತಟಸ್ಥರಾಗಿದ್ದ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮುಕ್ಕಾಟೀರ ಹರೀಶ್ ಮಾದಪ್ಪ, ಮತ್ತೋರ್ವ ಪ್ರಭಾವಿ ನಾಯಕ ಕದ್ದಣಿಯಂಡ ಹರೀಶ್ ಬೋಪಣ್ಣ ಅವರನ್ನು ಮನವೊಲಿಸುವ ಯತ್ನವನ್ನು ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾಡಿದರು.

ವೀರಾಜಪೇಟೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹರೀಶ್, ಶಿವು ಮಾದಪ್ಪ ಅವರ ಬೆಂಬಲಿಗರು ಪಾಲ್ಗೊಂಡಿದ್ದರು. ದಿಢೀರ್ ಆಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿದ ಬಗ್ಗೆ ಮುಕ್ಕಾಟೀರ ಶಿವು ಮಾದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಸೂಕ್ತ ಸ್ಥಾನಮಾನ ಸಿಗದ ಬಗ್ಗೆ ಅತೃಪ್ತಿ ಹೊರಹಾಕಿದರು.

ಸೀತಾರಾಮ್ ಅವರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತರಲು ಶ್ರಮಿಸಿದ್ದೇನೆ. ಕೆಲವರ ಅಧಿಕಾರ ದಾಹದಿಂದ ನಮಗೆ ಅವಕಾಶ ಸಿಗದಂತೆ ಮಾಡಲಾಗಿದೆ ಎಂದು ಕದ್ದಣಿಯಂಡ ಹರೀಶ್ ಬೋಪಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಈರ್ವರು ನಾಯಕರು ಹಾಲಿ ಜಿಲ್ಲಾಧ್ಯಕ್ಷರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಲ್ಲದೆ, ಹಲವರು ಪಕ್ಷ ತೊರೆಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಭಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕರಿಸುವಂತೆ ಕೋರಿದರು. ಈ ಬಗ್ಗೆ ಈರ್ವರು ನಾಯಕರು ಚಿಂತಿಸಿ ಮುಂದಿನ ನಡೆ ತಿಳಿಸುವುದಾಗಿ ವೀಣಾ ಅಚ್ಚಯ್ಯ ಅವರಲ್ಲಿ ತಿಳಿಸಿದರು.