ಸಿದ್ದಾಪುರ, ಜ. ೩೧: ವಿದೇಶಕ್ಕೆ ಕೆಲಸಕ್ಕೆಂದು ತೆರಳಿ ‘ವೀಸಾ’ದ ಅವಧಿ ಮುಗಿದ ಹಿನ್ನೆಲೆಯಲ್ಲಿ ಗೃಹ ಬಂಧನದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಜಿಲ್ಲೆಯ ಮಹಿಳೆಯನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ನಿವಾಸಿ ಪಾರ್ವತಿ (೩೦) ಕುವೈತ್ ರಾಷ್ಟçದಲ್ಲಿ ಕೆಲಸಕ್ಕೆ ತೆರಳಿ ಸಿಲುಕಿಕೊಂಡಿದ್ದ ಮಹಿಳೆ. ಇದೀಗ ಕೊಡಗು ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ಅಧಿಕಾರಿಗಳು ಸಂಪರ್ಕ ಸಾಧಿಸಿ ಅವರಿದ್ದ ಸ್ಥಳವನ್ನು ಗುರುತಿಸಿ ಭಾರತಕ್ಕೆ ಕರೆ ತರುವಲ್ಲಿ ಸಫಲರಾಗಿದ್ದು, ತಾ. ೧ ರಂದು (ಇಂದು) ಜಿಲ್ಲೆಗೆ ಬರಲಿದ್ದಾರೆ.
ಊಟಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಏಜೆಂಟ್ ಓರ್ವ ನಂಬಿಸಿ ಪಾರ್ವತಿಯನ್ನು ಕುವೈತ್ಗೆ ಕಳುಹಿಸಿದ್ದಾನೆ. ಆದರೆ, ವಿಸಿಟಿಂಗ್ ‘ವೀಸಾ’ದಡಿ ವಿದೇಶಕ್ಕೆ ಹೋಗಿದ್ದ ಹಿನ್ನೆಲೆ ೩ ತಿಂಗಳಿನ ಅವಧಿ ಮುಗಿದಿದೆ. ಇದನ್ನು ಪಾರ್ವತಿಗೆ ಏಜೆಂಟ್ ತಿಳಿಸಿರಲಿಲ್ಲ. ಜೊತೆಗೆ ಮಾಲೀಕರಿಂದ ರೂ. ೩ ಲಕ್ಷ ಹಣವನ್ನು ಪಾರ್ವತಿ ಹೆಸರಿನಲ್ಲಿ ಪಡೆದಿದ್ದಾನೆ. ಇದರಿಂದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ಪಾರ್ವತಿ ಕೆಲಸವೂ ಇಲ್ಲದೆ, ಸಂಬಳವೂ ಇಲ್ಲದೆ ಮಾಲೀಕರ ದಬ್ಬಾಳಿಕೆಗೆ ಒಳಗಾಗಿ ಗೃಹಬಂಧನದಲ್ಲಿ ಇದ್ದರು. ಮೊಬೈಲ್ ಮೂಲಕ ಪಾರ್ವತಿ ಕುಟುಂಬವನ್ನು ಸಂಪರ್ಕಿಸುವ ಪ್ರಯತ್ನ ಮಾಡುವ ಜೊತೆಗೆ ಕುವೈತ್ನಲ್ಲಿ
(ಮೊದಲ ಪುಟದಿಂದ) ಅನುಭವಿಸುತ್ತಿರುವ ನರಕಯಾತನೆಯ ವೀಡಿಯೋವನ್ನು ಮಾಡಿ ಕಳುಹಿಸಿದ್ದಾರೆ.
ಈ ಬಗ್ಗೆ ಜ. ೧೪ ರಂದು ‘ಶಕ್ತಿ’ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ವಿಪತ್ತು ನಿರ್ವಹಣಾಧಿಕಾರಿ ಆರ್.ಎಂ ಅನನ್ಯ ವಾಸುದೇವ್ ಅವರಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದರು. ತಕ್ಷಣ ರಕ್ಷಣೆಗೆ ಮುಂದಾದ ಅಧಿಕಾರಿ ಕುವೈತ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿ ನಿರಂತರ ಸಂಪರ್ಕವನ್ನು ಸಾಧಿಸಿ ಸತತ ಪ್ರಯತ್ನದ ಮೂಲಕ ಭಾರತೀಯ ರಾಯಭಾರಿ ಕಚೇರಿಯ ಸಹಾಯದೊಂದಿಗೆ ಕೊಡಗು ಜಿಲ್ಲಾಡಳಿತ ಸಂತ್ರಸ್ತ ಮಹಿಳೆಯನ್ನು ಕ್ಷೇಮವಾಗಿ ಭಾರತಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದೆ.
ಜ. ೩೧ ರಂದು ಕುವೈತ್ನಿಂದ ವಿಮಾನದ ಮೂಲಕ ಚೆನ್ನೆöÊಗೆ ತಲುಪಿದ ಮಹಿಳೆ ಚೆನ್ನೆöÊನಿಂದ ತನ್ನ ಸಹೋದರನೊಂದಿಗೆ ಬೆಂಗಳೂರಿಗೆ ಬಸ್ನಲ್ಲಿ ಬಂದು ಅಲ್ಲಿಂದ ಜಿಲ್ಲೆಗೆ ತಾ. ೧ ರಂದು (ಇಂದು) ಬೆಳಿಗ್ಗೆ ಕರಡಿಗೋಡಿನ ತನ್ನ ಮನೆಗೆ ಆಗಮಿಸಲಿದ್ದಾರೆ. ನಂತರ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಮತ್ತು ಕಂದಾಯ ಇಲಾಖಾಧಿಕಾರಿ ಪಾರ್ವತಿಯನ್ನು ಜಿಲ್ಲಾಡಳಿತ ಕಚೇರಿಗೆ ಪಾರ್ವತಿಯನ್ನು ಕರೆತರಲಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಪಾರ್ವತಿ, ‘ವೀಸಾ’ದ ಅವಧಿ ಮುಗಿದ ನಂತರ ಕುವೈತ್ ರಾಷ್ಟçದಲ್ಲಿ ಕೊಠಡಿಯೊಂದರಲ್ಲಿ ಗೃಹಬಂಧನದಲ್ಲಿದ್ದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಏಜೆಂಟ್ನನ್ನು ಸಂಪರ್ಕಿಸಿ ನನ್ನನ್ನು ನನ್ನ ಸ್ವಂತ ಊರಿಗೆ ಬರುವಂತೆ ಮಾಡಿದ್ದಾರೆ. ಕೆಲಸ ಇಲ್ಲದೇ ಸಂಬಳವು ಇಲ್ಲದೇ ನಿದ್ರೆ ಮಾಡದೆ ದಿನದೂಡುತ್ತಿದ್ದೆ. ಇದೀಗ ನಾನು ಕೆಲಸ ಮಾಡಿದ ಸಂಬಳವನ್ನು ಏಜೆಂಟ್ ನೀಡಿದ್ದಾನೆ ಎಂದು ತಿಳಿಸಿದರು.
(ವರದಿ : ವಾಸು)