೨೦೨೩-೨೪ನೇ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. ೬.೫ರಷ್ಟು ಬೆಳವಣಿಗೆ ನಿರೀಕ್ಷೆ

ನವದೆಹಲಿ, ಜ. ೩೧: ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. ೭ ಮತ್ತು ೨೦೨೧-೨೨ ರ ಆರ್ಥಿಕ ವರ್ಷದಲ್ಲಿ ಶೇ. ೮.೭ಕ್ಕೆ ಹೋಲಿಸಿದರೆ, ಭಾರತದ ಆರ್ಥಿಕ ಸಮೀಕ್ಷೆ (೨೦೨೨-೨೩) ಪ್ರಕಾರ ದೇಶದ ಆರ್ಥಿಕತೆಯು ೨೦೨೩-೨೪ ರಲ್ಲಿ ಶೇ. ೬.೫ ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. ೬.೮ ಹಣದುಬ್ಬರ ಪ್ರಕ್ಷೇಪಣವು ಖಾಸಗಿ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ ಅಥವಾ ಹೂಡಿಕೆಯನ್ನು ದುರ್ಬಲಗೊಳಿಸುವಷ್ಟು ಕಡಿಮೆಯಾಗಿಲ್ಲ ಎಂದು ಸೀತಾರಾಮನ್ ದೇಶದ ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟರು. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಸಿದ್ಧಪಡಿಸಿದ ಮತ್ತು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಕೇಂದ್ರ ಬಜೆಟ್ ಮಂಡನೆಗೆ ಮುನ್ನ ಆರ್ಥಿಕ ಸಮೀಕ್ಷೆಯ ದಾಖಲೆಗಳನ್ನು ಇಂದು ಲೋಕಸಭೆಯಲ್ಲಿ ವಿತ್ತ ಸಚಿವೆ ಮಂಡಿಸಿದರು.

ಪಿಎಂ ಕೇರ್ಸ್ ನಿಧಿಗೆ ಆರ್‌ಟಿಐ ಕಾಯ್ದೆ ಅನ್ವಯವಾಗಲ್ಲ: ಕೇಂದ್ರ ಸರ್ಕಾರ

ನವದೆಹಲಿ, ಜ. ೩೧: ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (ಪಿಎಂ ಕೇರ್ಸ್) ನಿಧಿಯು ಸಾರ್ವಜನಿಕ ಪ್ರಾಧಿಕಾರವಲ್ಲ, ಇದು ಮಾಹಿತಿ ಹಕ್ಕು ಕಾಯ್ದೆ ಹಾಗೂ ಅದರ ನಿಬಂಧನೆಗಳ ಅಡಿ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ದೆಹಲಿ ಹೈಕೋಟ್ ಗೆ ಮಾಹಿತಿ ನೀಡಿದೆ. ಪಿಎಂ ಕೇರ್ಸ್ ನಿಧಿಯನ್ನು ಭಾರತದ ಸಂವಿಧಾನದ ಅಥವಾ ಸಂಸತ್ತು ಅಥವಾ ರಾಜ್ಯ ಶಾಸಕಾಂಗ ಮಾಡಿದ ಯಾವುದೇ ಕಾನೂನಿನಿಂದ ರಚಿಸಲಾಗಿಲ್ಲ ಎಂದು ಕೇಂದ್ರವು ದೆಹಲಿ ಹೈಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ. ಈ ಟ್ರಸ್ಟ್ ಯಾವುದೇ ಸರ್ಕಾರ ಅಥವಾ ಸರ್ಕಾರದ ಯಾವುದೇ ಸಾಧನದಿಂದ ಮಾಲೀಕತ್ವವನ್ನು ಹೊಂದಲು ಉದ್ದೇಶಿಸಿಲ್ಲ ಅಥವಾ ವಾಸ್ತವವಾಗಿ ನಿಯಂತ್ರಿಸುವುದಿಲ್ಲ ಅಥವಾ ಗಣನೀಯ ವಾಗಿ ಹಣಕಾಸು ಒದಗಿಸುವುದಿಲ್ಲ. ಪಿಎಂ ಕೇರ್ಸ್ ನಿಧಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಖಾತ್ರಿಗಾಗಿ ಸಂವಿಧಾನದಡಿ ಅದನ್ನು ‘ರಾಜ್ಯ' ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಜುಲೈನಲ್ಲಿ ಕೇಂದ್ರವು ಸಲ್ಲಿಸಿದ ಒಂದು ಪುಟದ ಉತ್ತರದ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಅವರ ಪೀಠವು ಅಸಮಾಧಾನ ವ್ಯಕ್ತಪಡಿಸಿದ ನಂತರ ಸರ್ಕಾರವು ಈ ವಿಷಯದಲ್ಲಿ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಿದೆ.

ಇಂದು ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸ ಹೆಚ್ಚಾಗಿದೆ:ದ್ರೌಪದಿ ಮುರ್ಮು

ನವದೆಹಲಿ, ಜ. ೩೧: ಇಂದು ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸವು ಹೆಚ್ಚಾಗಿರುವುದು ದೇಶದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ, ಭಾರತದ ಕಡೆಗೆ ಪ್ರಪಂಚದ ದೃಷ್ಟಿಕೋನವು ಬದಲಾಗಿದೆ ಎಂದು ರಾಷ್ಟçಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಇಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭ ವಾಗಿದ್ದು, ಮೊದಲಿಗೆ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಷ್ಟçಪತಿ ದ್ರೌಪದಿ ಮುರ್ಮು ಅವರು ತಮ್ಮ ಚೊಚ್ಚಲ ಭಾಷಣ ಮಾಡಿದರು. ಮುಂದಿನ ೨೫ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಅದರ ಗತವೈಭವಕ್ಕೆ ಹೋಲಿಕೆ ಮಾಡಿ ನೋಡುವಂತೆ ಮತ್ತು ಆಧುನಿಕತೆಯ ಪ್ರತಿ ಸುವರ್ಣ ಅಧ್ಯಾಯವನ್ನು ಒಳಗೊಂಡಿರುವ ಅಭಿವೃದ್ಧಿಯನ್ನು ನೋಡಲು ಜನರು ತಮ್ಮ ಪರಿಶ್ರಮ ಹಾಕಬೇಕೆಂದು ಹೇಳಿದರು. ಭಾರತ ಸ್ವಾತಂತ್ರ‍್ಯದ ಶತಮಾ ನೋತ್ಸವ ಇನ್ನು ೨೫ ವರ್ಷಗಳಲ್ಲಿ ಬರಲಿದ್ದು, ಈ ೨೫ ವರ್ಷಗಳು ‘ಅಮೃತ ಕಾಲ' ‘ಆತ್ಮನಿರ್ಭರ್' (ಸ್ವಾವಲಂಬಿ) ಮತ್ತು ಅದರ ಮಾನವೀಯ ಜವಾಬ್ದಾರಿಗಳನ್ನು ಪೂರೈಸುವ ಭಾರತವನ್ನು ನಿರ್ಮಿಸುವ ಸಮಯವಾಗಿದೆ ಎಂದು ಹೇಳಿದರು.

ಮನ್ ಮೋಹನ್ ಸಿಂಗ್‌ಗೆ ಜೀವಮಾನ ಸಾಧನೆ ಗೌರವ

ನವದೆಹಲಿ, ಜ. ೩೧: ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಇತ್ತೀಚಿಗೆ ಲಂಡನ್‌ನಲ್ಲಿ ಜೀವಮಾನ ಸಾಧನೆ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ಕಳೆದ ವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದ್ದು, ತದ ನಂತರ ರಾಷ್ಟಿçÃಯ ಭಾರತೀಯ ವಿದ್ಯಾರ್ಥಿಗಳು ಮತ್ತು ಯುಕೆ ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದ ನವ ದೆಹಲಿಯಲ್ಲಿ ಡಾ. ಸಿಂಗ್ ಅವರಿಗೆಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ. ಭಾರತದಲ್ಲಿನ ಬ್ರಿಟಿಷ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಬ್ರಿಟಿಷ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದ ಭಾರತೀಯ ವಿದ್ಯಾರ್ಥಿಗಳ ಸಾಧನೆಯನ್ನು ಪರಿಗಣಿಸಿ ಭಾರತ-ಯುಕೆಯಲ್ಲಿರುವ ಸಾಧಕರನ್ನು ಲಂಡನ್‌ನ ಎನ್‌ಐಎಸ್‌ಎಯು ನಿಂದ ಗೌರವಿಸಲಾಗುತ್ತದೆ. ಆಕ್ಸ್ ಫರ್ಡ್ ಮತ್ತು ಕೆಂಬ್ರಿಡ್ಜ್ ವಿವಿಯಲ್ಲಿನ ಶೈಕಣಿಕ ಸಾಧನೆಗಾಗಿ ಡಾ. ಸಿಂಗ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಚಿನ್ನಾಭರಣ ಅಂಗಡಿಗಳ ಮೇಲೆ ಐಟಿ ದಾಳಿ

ಬೆಂಗಳೂರು, ಜ. ೩೧: ತೆರಿಗೆ ವಂಚಿಸಿ ವ್ಯಾಪಾರ ಮಾಡುತ್ತಿದ್ದ ಬೆಂಗಳೂರು ನಗರದ ಸುಮಾರು ೨೫ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ಯಲ್ಲಿನ ವ್ಯಾಪಾರಿಗಳ ಅಂಗಡಿಗಳ ಮೇಲೆ ದಾಳಿ ಮಾಡಿ, ದಾಖಲೆ ಪತ್ರಗಳ ಶೋಧ ಕಾರ್ಯ ನಡೆಸಿದ್ದಾರೆ. ಸುಮಾರು ೩೦೦ಕ್ಕೂ ಅಧಿಕ ಅಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು. ತಂಡ, ತಂಡವಾಗಿ ಅಧಿಕಾರಿಗಳು ಚಿನ್ನಾಭರಣ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಚಿನ್ನದ ವ್ಯಾಪಾರ, ತೆರಿಗೆ ಕಟ್ಟಿರುವ ರಶೀದಿ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಆಂಧ್ರಪ್ರದೇಶದ ನೂತನ ರಾಜಧಾನಿ ವಿಶಾಖಪಟ್ಟಣ: ಸಿಎಂ ಜಗನ್ ಮೋಹನ್ ರೆಡ್ಡಿ

ಅಮರಾವತಿ, ಜ. ೩೧: ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ವಿಶಾಖಪಟ್ಟಣ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಮಂಗಳವಾರ ಘೋಷಣೆ ಮಾಡಿದ್ದಾರೆ. ನವದೆಹಲಿಯಲ್ಲಿ ನಡೆದ ಅಂರ‍್ರಾಷ್ಟಿçÃಯ ರಾಜತಾಂತ್ರಿಕ ಒಕ್ಕೂಟ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ, ವಿಶಾಖಪಟ್ಟಣ (ವೈಝಾಗ್) ನಮ್ಮ ರಾಜ್ಯದ ಹೊಸ ರಾಜಧಾನಿಯಾಗಲಿದೆ ಎಂದು ಘೋಷಣೆ ಮಾಡಿದ್ದಾರೆ. ನಮ್ಮ ರಾಜಧಾನಿಯಾಗಿರುವ ವಿಶಾಖಪಟ್ಟಣಕ್ಕೆ ನಿಮ್ಮನ್ನು ಆಹ್ವಾನಿಸಲು ನಾನು ಇಲ್ಲಿದ್ದೇನೆ. ನಾನು ಕೂಡ ವೈಝಾಗ್‌ಗೆ ಶಿಫ್ಟ್ ಆಗುತ್ತೇನೆ. ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭ ಎಂದು ನೀವೇ ನೋಡಲು ನಾನು ನಿಮ್ಮನ್ನು ಹಾಗೂ ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ ಎಂದು ಸಿಎಂ ಜಗನ್ ರೆಡ್ಡಿ ಹೇಳಿದರು. ಮಾರ್ಚ್ ೩ ಮತ್ತು ೪ ರಂದು ಬಂದರು ನಗರದಲ್ಲಿ ಶೃಂಗಸಭೆ ನಡೆಯಲಿದ್ದು, ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಸಿಎಂ ಜಗನ್, ಜಾಗತಿಕ ಹೂಡಿಕೆದಾರರು, ರಾಜತಾಂತ್ರಿಕರು ಮತ್ತು ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿದರು.

ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ : ಸಾವಿನ ಸಂಖ್ಯೆ ೮೩ಕ್ಕೆ ಏರಿಕೆ

ಪೇಶಾವರ, ಜ. ೩೧: ಪೇಶಾವರದ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಂದರಲ್ಲಿ ಸೋಮವಾರ ನಡೆದಿದ್ದ ಪ್ರಬಲ ಆತ್ಮಹತ್ಯಾ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ೮೩ಕ್ಕೆ ಏರಿಕೆಯಾಗಿದೆ. ಪೇಶಾವರದ ಮಸೀದಿಯಲ್ಲಿ ನಿನ್ನೆ ಮಧ್ಯಾಹ್ನ ೧.೪೦ರ ಸುಮಾರಿಗೆ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಆಗಷ್ಟೇ, ಪ್ರಾರ್ಥನೆ ಮುಗಿಸಿದ್ದರಿಂದ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪರಿಣಾಮ ಸ್ಫೋಟದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮಸೀದಿಯಲ್ಲಿ ಸುಮಾರು ೨೬೦ ಜನ ಇದ್ದರು. ಎಲ್ಲರೂ ಆಗಷ್ಟೇ ಪ್ರಾರ್ಥನೆ ಮುಗಿಸಿದ್ದರು. ಇದೇ ವೇಳೆ ಆತ್ಮಾಹುತಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರಲ್ಲಿ ಮತ್ತಷ್ಟು ಜನರ ಪರಿಸ್ಥಿತಿ ಗಂಭೀರವಾಗಿರುವುದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ದಾಳಿಯ ಕುರಿತು ಇದುವರೆಗೆ ಯಾವುದೇ ಉಗ್ರ ಸಂಘಟನೆಯು ಹೊಣೆ ಹೊತ್ತುಕೊಂಡಿಲ್ಲ.