ಮಡಿಕೇರಿ, ಜ. ೨೮: ಭಾರತ ಸೇನೆಯ ಮೊದಲ ಮಹಾದಂಡನಾಯಕ ಫೀ.ಮಾ. ಕೊಡಂದೇರ ಎಂ. ಕಾರ್ಯಪ್ಪ ೧೨೪ನೇ ಜನ್ಮದಿನದ ಅಂಗವಾಗಿ ನಗರದಲ್ಲಿರುವ ಅವರ ಪ್ರತಿಮೆಗೆ ಗಣ್ಯರು ಪುಷ್ಪನಮನದ ಮೂಲಕ ಗೌರವ ಸಲ್ಲಿಸಿದರು.

ನಗರದ ಕಾರ್ಯಪ್ಪ ವೃತ್ತದಲ್ಲಿರುವ ಫೀ.ಮಾ. ಕಾರ್ಯಪ್ಪ ಅವರ ಪ್ರತಿಮೆಗೆ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ನಿವೃತ್ತ ಏರ್‌ಮಾರ್ಷಲ್ ನಂದಾ ಕಾರ್ಯಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಚೀರ ಎ. ಅಯ್ಯಪ್ಪ, ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ, ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಕಣ್ಣನ್, ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟರಾಜು, ಸೈನಿಕ ಕಲ್ಯಾಣ ಇಲಾಖೆ ಜಂಟಿ ನಿದೇಶಕ ಮೇಜರ್ ಬಾಲಸುಬ್ರಮಣ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು ಪುಷ್ಪಗುಚ್ಚ ಅರ್ಪಿಸುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಭಾರತವನ್ನು ಸುಭದ್ರವಾಗಿಡಲು ಪಣತೊಟ್ಟು ಕಾರ್ಯನಿರ್ವಹಿಸಿದ ಕಾರ್ಯಪ್ಪ ಅವರು ಚಿರಸ್ಮರಣೀಯರು. ಶಿಸ್ತುಪಾಲನೆ, ಸಂಯಮ, ಪ್ರಾಮಾಣಿಕತೆ, ಸಮಯಪಾಲನೆಗೆ ಹೆಸರುವಾಸಿಯಾಗಿದ್ದ ಇವರ ಜೊತೆ ಕೆಲ ಅವಧಿ ಕಾಲಕಳೆಯುವ ಅವಕಾಶ ತನಗೆ ದೊರೆತಿತ್ತು. ಅವರ ಜೊತೆ ಮಾತನಾಡುವ ಸಂದರ್ಭ ಅವರೊಳಗಿದ್ದ

(ಮೊದಲ ಪುಟದಿಂದ) ಸಕರಾತ್ಮಕ ಚಿಂತನೆಗಳು ನಮ್ಮನ್ನು ಜಾಗೃತಗೊಳಿಸುತಿತ್ತು. ಸಾರ್ಥಕವಾಗಿ ಬದುಕಿ ಬಾಳಿದ ಕಾರ್ಯಪ್ಪ ಅವರ ಚಿಂತನೆ, ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಫೀ.ಮಾ. ಕಾರ್ಯಪ್ಪ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಭೂಮಿಕ ಎನ್. (ಪ್ರ), ಕೆ.ಕೆ. ಅಯ್ಯಪ್ಪ (ದ್ವಿ), ಎಂ.ಎA. ಕೆನತ್ ರಾಯ್ (ತೃ) ಬಹುಮಾನ ಪಡೆದುಕೊಂಡರು.

ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕಾರ್ಮಿಕಾಧಿಕಾರಿ ಅನಿಲ್ ಬಗಟಿ, ಕೊಡವ ಸಾಹಿತ್ಯ ಅಕಾಡೆಮಿ ರಿಜಿಸ್ಟಾçರ್ ಅಜ್ಜಿಕುಟ್ಟೀರ ಗಿರೀಶ್, ತಹಶೀಲ್ದಾರ್ ಮಹೇಶ್, ಎನ್.ಸಿ.ಸಿ. ಕೆಡೆಟ್‌ಗಳು, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.