ಕುಶಾಲನಗರ, ಜ. ೨೮: ಅನಿಶ್ಚಿತ ಬದುಕಿನ ನಡುವೆ ಪ್ರತಿಯೊಬ್ಬರು ದಾನ-ಧರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಅರೆಮಾದನಹಳ್ಳಿ ವಿಶ್ವಕರ್ಮಜಗದ್ಗುರು ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು ಕರೆ ನೀಡಿದರು.
ಶಿರಂಗಾಲ ಗ್ರಾಮದೇವತೆ ಶ್ರೀ ಮಂಟಿಗಮ್ಮ ಜೀರ್ಣೋದ್ಧಾರ ಹಾಗೂ ಸ್ಥಿರಬಿಂದು ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಜೀವನದಲ್ಲಿ ದಾನ-ಧರ್ಮಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ. ಸ್ವಾರ್ಥ ಬದುಕಿನಿಂದ ಗುರಿ ತಲುಪುವುದು ಅಸಾಧ್ಯ. ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಭಗವಂತನಿಗೆ ಸಮರ್ಪಣೆ ಮಾಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸಲು ಸಾಧ್ಯ ಎಂದರು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ದೇವರ ಶಕ್ತಿಯ ಮೂಲಕ ಯಶಸ್ಸು ಗಳಿಸಲು ಸಾಧ್ಯ ಎಂದರು.
ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ೮ ಕೋಟಿ ರೂ. ಅಧಿಕ ಕಾಮಗಾರಿ ನಡೆಸಿದ್ದು, ಸ್ಥಳೀಯ ದೇವಾಲಯಗಳ ಅಭಿವೃದ್ಧಿಗೆ ರೂ. ೩೨ ಲಕ್ಷ ಅನುದಾನ ಕಲ್ಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ದೇವಾಲಯ ನಿರ್ಮಾಣಕ್ಕೆ ಹೆಚ್ಚಿನ ಸಹಾಯಧನ ನೀಡಿದ ಸ್ಥಳೀಯರಾದ ಎಸ್.ವಿ. ನಂಜುAಡಪ್ಪ ದಂಪತಿ, ಉದ್ಯಮಿ ಟಿ.ಎಲ್. ಲೋಕೇಶ್ ಕುಟುಂಬ ಹಾಗೂ ದೇವಸ್ಥಾನ ತಾಂತ್ರಿಕ ಸಲಹೆಗಾರರಾದ ಕಣಿವೆಯ ಆರ್.ಆರ್. ಕುಮಾರ್ ಅವರ ಕುಟುಂಬ ಸದಸ್ಯರನ್ನು ಮತ್ತು ಹಲವು ದಾನಿಗಳನ್ನು ಸನ್ಮಾನಿಸಲಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಅವರು ಮಾತನಾಡಿ, ಶಿರಂಗಾಲ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಉತ್ತಮ ದೇವಾಲಯ ನಿರ್ಮಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಗ್ರಾಮ ದೇವತಾ ಸಮಿತಿಯ ಅಧ್ಯಕ್ಷ ಎಸ್.ಸಿ. ರುದ್ರಪ್ಪ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಕುಂಚಿಟಿಗರ ಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮಿಗಳು, ಬಸವಪಟ್ಟಣ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮಿಗಳು, ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮಿಗಳು, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಶಿವಚಾರ್ಯ ಸ್ವಾಮಿಗಳು, ಮನೆಹಳ್ಳಿ ಮಠದ ಮಹಾಂತಲಿAಗ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ದವಸ ಧಾನ್ಯಗಳನ್ನು ಭಂಡಾರಕ್ಕೆ ತುಂಬಿಸುವುದು, ಅರ್ಚಕ ಗಣೇಶ್ ತಂಡದಿAದ ವೇದಘೋಷ, ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಜೀರ್ಣೋದ್ಧಾರ ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ವಿ. ಶಿವಾನಂದ್ ಅವರು ದೇವಾಲಯದ ಇತಿಹಾಸವನ್ನು ವಿವರಿಸಿದರು. ಕಾರ್ಯದರ್ಶಿ ಬಿ.ಎಸ್. ಬಸವಣ್ಣಯ್ಯ, ಗ್ರಾಮದೇವತಾ ಸಮಿತಿಯ ಎಸ್.ಎಸ್. ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅಭಿಲಾಷ್, ಎಂ.ಎಸ್. ಗಣೇಶ್, ಸಿ.ಎನ್ ಲೋಕೇಶ್, ಎನ್.ಜಿ. ನಿಂಗರಾಜಪ್ಪ, ಡಿ.ಅರ್. ಕೃಷ್ಣಶೆಟ್ಟಿ, ನಟೇಶ್ಗೌಡ, ಸೇರಿದಂತೆ ದಾನಿಗಳು, ಗ್ರಾಮಸ್ಥರು, ಭಕ್ತಾಧಿಗಳು ಇದ್ದರು. ರುದ್ರಾಭಿಷೇಕ, ಅಲಂಕಾರ, ಹೋಮ ಮತ್ತಿತರ ಪೂಜಾ ಕಾರ್ಯಕ್ರಮಗಳ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.