ಗೋಣಿಕೊಪ್ಪ ವರದಿ, ಜ. ೨೬: ಸಮರ್ಥರ ಆಯ್ಕೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಅರಿವು ಅಗತ್ಯ ಎಂದು ಪೊನ್ನಂಪೇಟೆ ತಹಶೀಲ್ದಾರ್ ಎನ್. ಎಸ್. ಪ್ರಶಾಂತ್ ಹೇಳಿದರು. ಪೊನ್ನಂಪೇಟೆ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಕಾವೇರಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜೆಗಳಿಂದ ರಾಷ್ಟçವನ್ನು ಮುನ್ನಡೆಸಲು ಮತದಾನ ಅವಶ್ಯ. ಯುವ ಸಮೂಹ ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಜ್ಞಾನವನ್ನು ಹೆಚ್ಚು ಹೊಂದಿರುತ್ತಾರೆ. ಇದು ದೇಶದ ಅಭಿವೃದ್ಧಿಗೆ ಪೂರಕವಾಗಲಿದ್ದು, ಆಮಿಷಗಳು, ಮತ ಬಹಿಷ್ಕಾರಗಳಿಂದ ಅಸಮರ್ಥರ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಶೇ. ೧೦೦ ರಷ್ಟು ಮತದಾನದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಅರಿವು ಅಗತ್ಯ ಎಂದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಇಟ್ಟೀರ ಕೆ. ಬಿದ್ದಪ್ಪ ಮಾತನಾಡಿ, ದೇಶ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮುಂದುವರಿಯಲು ಚುನಾವಣೆ ಮುಖ್ಯವಾಗಲಿದೆ. ಭಾರತ ಮತ್ತಷ್ಟು ಬಲಶಾಲಿಯಾಗಲು ಯುವ ಸಮೂಹದ ಪಾತ್ರ ಮುಖ್ಯವಾಗಿದೆ. ಮತದಾನದೊಂದಿಗೆ ಮತದ ಬಗ್ಗೆ ಜಾಗೃತಿ ಮೂಡಿಸಲು ಯುವ ಸಮೂಹ ಮುಂದಾಗಬೇಕು ಎಂದು ಸಲಹೆ ನೀಡಿದರು.

ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಕೆ.ಪಿ. ದೀಕ್ಷಿತ್‌ಕುಮಾರ್ ಮಾತನಾಡಿ, ಒಂದು ಮತ ಕೂಡ ದೇಶವನ್ನು ಬಲಿಷ್ಠಗೊಳಿಸುವಷ್ಟು ಶಕ್ತವಾಗಿದೆ ಎಂಬ ಅರಿವು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಹಾಡಿನ ಮೂಲಕ ಜಾಗೃತಿ ಮೂಡಿಸಿದರು. ಚುನಾವಣಾ ಆಯೋಗದಿಂದ ನೇರವಾಗಿ ಸಂದೇಶದ ತುಣುಕುಗಳನ್ನು ಬಿತ್ತರಿಸಲಾಯಿತು. ವಿಶ್ವದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಶಾಲಿಯಾಗಿದ್ದು, ಮತದಾನದ ಮಹತ್ವ, ದೇಶ, ರಾಜಕೀಯ ವ್ಯವಸ್ಥೆ, ಮತದಾರನ ಅಭಿವೃದ್ಧಿಗೆ ಮುಖ್ಯ ಎಂಬುವುದನ್ನು ತಿಳಿಸಲಾಯಿತು. ಮತದಾರ ಚೀಟಿ ವಿತರಣೆ ಮಾಡಲಾಯಿತು. ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪೊನ್ನಂಪೇಟೆ ತಾಲೂಕು ಪಂಚಾಯಿತಿ ಇಒ ಕೊಣಿಯಂಡ ಸಿ. ಅಪ್ಪಣ್ಣ, ತಾಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಆರ್. ರಾಜೇಶ್, ಕಾವೇರಿ ಕಾಲೇಜು ಉಪ ಪ್ರಾಂಶುಪಾಲ ಡಾ. ಅಜ್ಜಿಕುಟ್ಟೀರ ಎಸ್. ಪೂವಮ್ಮ ಇದ್ದರು. ಎಸ್. ಎಂ. ರಜನಿ ನಿರೂಪಿಸಿದರು. ಕೆ. ಪಿ. ಸೀತಮ್ಮ ಸ್ವಾಗತ, ಕಾವ್ಯ ವಂದಿಸಿದರು.