ಹೆಬ್ಬಾಲೆ, ಜ. ೨೭ : ಸಮೀಪದ ಶಿರಂಗಾಲ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ಜೀರ್ಣೋದ್ಧಾರ ಹಾಗೂ ಸ್ಥಿರ ಬಿಂದು ಪ್ರತಿಷ್ಠಾಪನೆ ಮಹೋತ್ಸವದ ಅಂಗವಾಗಿ ಶುಕ್ರವಾರ ಜರುಗಿದ ಮಂಟಿಗಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ನಡೆಯಿತು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾರ್ಗದರ್ಶನ ದಲ್ಲಿ ವೇದಮೂರ್ತಿ ಗಣೇಶ ಶಾಸ್ತಿç, ವೇದಬ್ರಹ್ಮ, ಪುಟ್ಟಸ್ವಾಮಿ ಶಾಸ್ತಿç, ವೇದಮೂರ್ತಿ ನಂದೀಶ್ ಶಾಸ್ತಿç, ಮೇಘರಾಜ್ ಶಾಸ್ತಿç, ಸಚಿನ್ ಶಾಸ್ತಿç ಸಹಯೋಗದಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಸಂಪನ್ನಗೊಳಿಸಲಾಯಿತು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದೇವಸ್ಥಾನದ ಮಹಾದ್ವಾರದ ಉದ್ಘಾಟನೆ ನೆರವೇರಿಸಿದರು. ಪ್ರತಿಷ್ಠಾಪನೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಹಾಗೂ ವಿವಿಧ ಪುಷ್ಪಾಹಾರಗಳಿಂದ ಶೃಂಗರಿಸಲಾಗಿತ್ತು. ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ದೇವರ ಉತ್ಸವದಲ್ಲಿ ಶಿರಂಗಾಲ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಯ ಗಡಿಭಾಗದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.

ಪೂರ್ಣ ಕುಂಭ ಮೇಳ : ಗ್ರಾಮ ದೇವತೆ ಶ್ರೀ ಮಂಟಿಗಮ್ಮ ಜೀರ್ಣೋದ್ಧಾರ ಹಾಗೂ ಸ್ಥಿರ ಬಿಂದು ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಪವಿತ್ರ ಕಾವೇರಿ ನದಿಯಿಂದ ಐದು ನೂರು ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ಮೆರವಣಿಗೆ ನಡೆಸಿದರು.

ಮಂಗಳವಾದ್ಯ, ವೀರಗಾಸೆ ವೀರಭದ್ರೇಶ್ವರ ಕುಣಿತದೊಂದಿಗೆ ಗ್ರಾಮಸ್ಥರು ಕಾವೇರಿ ನದಿಯಲ್ಲಿ ಗಂಗೆ ಪೂಜೆ ನೆರವೇರಿಸಿ ಪೂರ್ಣಕುಂಭ ಕಳಶವನ್ನು ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ವಿವಿಧ ಮಹಿಳಾ ಕಲಾಮೇಳಗಳ ಭವ್ಯ ಕಲಾ ಪ್ರದರ್ಶನ ಮೆರುಗು ನೀಡಿತು.

ಧಾರ್ಮಿಕ ಕಾರ್ಯಕ್ರಮ : ದೇವಾಲಯಗಳು, ಮಠಮಾನ್ಯಗಳು ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿದ್ದು, ಜನರ ಶಾಂತಿ ನೆಮ್ಮದಿ ಆಶ್ರಯ ತಾಣವಾಗಿವೆ ಎಂದು ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಎಂ. ಸಿದ್ಧರಾಜಪ್ಪ ಹೇಳಿದರು.

ಪೋಷಕರು ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಹಾಗೂ ಬದುಕಿನ ಉತ್ತಮ ಮೌಲ್ಯಗಳನ್ನು ಬೆಳೆಸಬೇಕು. ಇದರಿಂದ ಸಮಾಜಕ್ಕೆ ಉತ್ತಮ ನಾಗರಿಕರ ಕೊಡುಗೆ ಸಾಧ್ಯ ಎಂದರು. ಗ್ರಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ದೇವಾಲಯ ಸಮಿತಿ ಪಿಯು ಕಾಲೇಜಿಗೆ ಜಾಗ ಖರೀದಿಸಿ ಕೊಡುವ ಮೂಲಕ ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು. ಈ ಶಿರಂಗಾಲ ಗ್ರಾಮ ಸರ್ವ ಜನಾಂಗೀಯ ಶಾಂತಿಯ ತೋಟವಿದ್ದಂತೆ ಎಂದು ಬಣ್ಣಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಶಿರಂಗಾಲ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಉತ್ತಮ ದೇವಸ್ಥಾನ ನಿರ್ಮಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಗ್ರಾಮದ ಒಗ್ಗಟ್ಟು ಇತರ ಗ್ರಾಮಗಳಿಗೂ ಮಾದರಿಯಾಗಿದೆ ಎಂದರು.

ದೇವಾಲಯದ ವಾಸ್ತುಶಿಲ್ಪ ಆರ್.ಆರ್.ಕುಮಾರ್ ಮಾತನಾಡಿ, ಗ್ರಾಮದ ಮಂಟಿಗಮ್ಮ ದೇವಿಯ ಶಕ್ತಿ ಅಪಾರವಾದದ್ದು, ಈ ತಾಯಿಯ ದಯೆಯಿಂದ ಒಂದೇ ವರ್ಷದಲ್ಲಿ ಭವ್ಯವಾದ ದೇವಾಲಯ ನಿರ್ಮಾಣ ಮಾಡಲು ಸಾಧ್ಯವಾಗಿದೆ. ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ ಸದಾಶಿವ ಸ್ವಾಮೀಜಿ, ಗ್ರಾಮಸ್ಥರಿಗೆ ಹಾಗೂ ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ದೇವಾಲಯ ಸಮಿತಿ ಮುಖಂಡ ಸಿ.ಎನ್.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಕೆ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಜೀರ್ಣೋದ್ಧಾರ ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಬಿ.ಎಸ್.ಬಸವಣ್ಣಯ್ಯ, ಗ್ರಾಮ ದೇವತಾ ಸಮಿತಿ ಅಧ್ಯಕ್ಷ ಎಸ್.ಸಿ.ರುದ್ರಪ್ಪ, ಕಾರ್ಯದರ್ಶಿ ಎಸ್.ಎಸ್.ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಅಭಿಲಾಷ್, ಮುಖಂಡರಾದ ಡಾ.ದಿನೇಶ್ ಬೈರೇಗೌಡ, ಎಂ.ಎಸ್. ಗಣೇಶ್, ಸಿ.ಎನ್. ಲೋಕೇಶ್, ಎಸ್.ಸಿ. ಹಲಗಪ್ಪ, ಎನ್.ಜಿ. ನಿಂಗರಾಜಪ್ಪ, ಎಸ್.ಪಿ. ಚೇತನ್, ಎಸ್.ಬಿ. ರವಿ, ಡಿ.ಆರ್. ಕೃಷ್ಣಶೆಟ್ಟಿ, ನಟೇಶ್ ಗೌಡ, ಎನ್.ಎಸ್. ರಮೇಶ್, ಕೆ.ಬಿ.ಕೆಂಪೇಗೌಡ, ಎಸ್.ವಿ.ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.