ಗೋಣಿಕೊಪ್ಪ, ಜ. ೨೬: ರೈತರಿಗೆ ಹೆಚ್ಚಿನ ಆರೋಗ್ಯ ಸೌಲಭ್ಯಗಳು ಸಿಗಬೇಕೆಂಬ ಉದ್ದೇಶದೊಂದಿಗೆ ಸಾವಿರಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ ಯಶಸ್ವಿನಿ ಯೋಜನೆಯಡಿಯಲ್ಲಿ ೧೬೫೦ ಬಗೆಯ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಪೊನ್ನಪ್ಪಸಂತೆ ಗ್ರಾಮದಲ್ಲಿ ನಿರ್ಮಾಣವಾದ ಬಾಳೆಲೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ಮತ್ತು ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿದರು.
ಯಶಸ್ವಿನಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ ೩೦ರವರೆಗೆ ಅವಧಿ ವಿಸ್ತರಿಸಲಾಗಿದೆ. ಇದರ ಅನುಕೂಲವನ್ನು ಪ್ರತಿಯೊಬ್ಬ ಸಹಕಾರಿ ಸದಸ್ಯ ಮತ್ತು ರೈತರು ಪಡೆದುಕೊಳ್ಳಬೇಕೆಂದು ಹೇಳಿದರು. ಈಗಾಗಲೇ ೩೩ ಲಕ್ಷದಷ್ಟು ರೈತರು ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊAಡಿದ್ದಾರೆ ಎಂದು ತಿಳಿಸಿದರು.
೫೭೪೪ ಸಹಕಾರ ಸಂಘಗಳನ್ನು ಒಂದೇ ಆ್ಯಪ್‌ನಡಿಯಲ್ಲಿ ತಂದು ಸಹಕಾರ ಸಂಘಗಳ ಸದಸ್ಯರುಗಳಿಗೆ ಸುಲಭ ಸೌಲಭ್ಯಗಳನ್ನು ಒದಗಿಸಲು ಚಿಂತನೆ ಹರಿಸಲಾಗಿದೆ. ಈ ವಿಚಾರವಾಗಿ ಕೇಂದ್ರ ಸಚಿವ ಅಮಿತ್ ಶಾ ಅವರು ಯೋಜನೆಯನ್ನು ರೂಪಿಸಿದ್ದು, ಹಂತ ಹಂತವಾಗಿ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.
ರೈತರ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಈ ನಿಟ್ಟಿನಲ್ಲಿ ರೈತರು ಫ್ರೂಟ್ಸ್ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಕಾರ ಸಂಘದ ಸೇವೆಗಳ ಬಗ್ಗೆ ಬಹಳಷ್ಟು ಶಾಸಕರಿಗೆ ಅರಿವು ಇದ್ದಂತಿಲ್ಲ. ಆದರೆ, ಕೊಡಗಿನ ಶಾಸಕರು ಈ ಬಗ್ಗೆ ಹೆಚ್ಚಿನ ಜ್ಞಾನವಂತ ರಾಗಿದ್ದು, ರೈತರಿಗೆ ಅನಾನುಕೂಲ ವಾಗುವ ಯೋಜನೆಗಳನ್ನು ನೇರವಾಗಿ ತಿಳಿಸುವ ವಿಚಾರವಂತರಾಗಿದ್ದಾರೆ ಎಂದು ಹೇಳಿದ ಸಚಿವರು, ೨೨೪ ಬಲ ಹೊಂದಿರುವ ವಿಧಾನಸಭಾ ಸದಸ್ಯರ ಸಂಖ್ಯೆಯಲ್ಲಿ ಅಧಿವೇಶನ ನಡೆಯುವ ಸಂದರ್ಭ ಕೇವಲ ೨೫ ಸಂಖ್ಯಾಬಲವನ್ನು ಕೊನೆಯವರೆಗೆ ಹೊಂದಿರುತ್ತಾರೆ. ಅದರಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಕೂಡ ಒಬ್ಬರು. ಅಧಿವೇಶನದ ಪ್ರಾರಂಭದಿAದ ಮುಕ್ತಾಯವರೆಗೂ ಹಾಜರಿಯಲ್ಲಿದ್ದು, ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಾರೆ. ಅಲ್ಲದೇ ಸಭೆಯಲ್ಲಿ ಕೆಲವು ಕಾನೂನಾತ್ಮಕ ಜಟಿಲ ಸಮಸ್ಯೆಗಳಿಗೆ ಪರಿಹಾರ ನೀಡಲು ಸಭಾ ಅಧ್ಯಕ್ಷರೇ ಶಾಸಕರಿಗೆ ಜವಾಬ್ದಾರಿಯನ್ನು ನೀಡುವ ವಿಚಾರಗಳು ಕೂಡ ಪದೇ ಪದೇ ನಡೆಯುತ್ತದೆ. ಇಂತಹ ವಿಚಾರವಾದಿ ರಾಜಕಾರಣಿ ಕೊಡಗಿನ ಜನರ ಆಯ್ಕೆ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕರ ರಾಜಕೀಯದ ಸಮರ್ಪಕ ನೇರ ನಡೆಯನ್ನು ಶ್ಲಾಘಿಸಿದರು.
ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಹಕಾರ ಸಂಘಗಳ ಬಲವರ್ಧನೆಗೆ ಮಹಿಳಾ ಸ್ವಸಹಾಯ ಸಂಘಗಳ ಕ್ರಿಯಾಶೀಲ ಚಟುವಟಿಕೆಗಳೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
ಬಾಳೆಲೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಅಧ್ಯಕ್ಷ ಚಿಮ್ಮಣಮಾಡ ಎಸ್. ಕೃಷ್ಣಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಕೇಂದ್ರದ ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಗಾಯಿತ್ರಿ ಸರಿತಾ, ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಪೋಡಮಾಡ ಸುಕೇಶ್, ನಿಟ್ಟೂರು ಗ್ರಾ.ಪಂ. ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ಪೊನ್ನಪ್ಪಸಂತೆ ಗ್ರಾ.ಪಂ. ಅಧ್ಯಕ್ಷೆ ಚಿಯಕ್‌ಪೂವಂಡ ಪ್ರಭ, ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಆದೇಂಗಡ ಚಂದ್ರಶೇಖರ್, ಪೋಡಮಾಡ ನಾಚಪ್ಪ, ಕಾಂಡೇರ ತೇಜ, ಮಾಚಂಗಡ ಮುತ್ತಣ್ಣ, ಕಳ್ಳಿಚಂಡ ಚಿತ್ರ, ಅಡ್ಡೇಂಗಡ ಗೀತಾ, ಹೆಚ್.ಹೆಚ್. ಗಣೇಶ್, ಪಿ.ಕೆ. ಚಂದ್ರ, ಕೆ.ಆರ್. ಗಜಾನನ, ಪಿ. ಲಲಿತಾ, ಕೆ.ಬಿ. ದೇವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ. ಸೀತಮ್ಮ ಹಾಗೂ ಸಿಬ್ಬಂದಿಗಳು, ಸಹಕಾರ ಸಂಘದ ಸದಸ್ಯರುಗಳು, ಗ್ರಾಮಸ್ಥರು ಇದ್ದರು.
-ಎನ್.ಎನ್. ದಿನೇಶ್