ಸಿದ್ದಾಪುರ, ಜ. ೨೭: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು, ಆದಿವಾಸಿಗಳಿಗೆ ಪೌಷ್ಟಿಕ ಆಹಾರ ಹಾಗೂ ಹಕ್ಕುಪತ್ರ ಒದಗಿಸಿಕೊಡ ಬೇಕೆಂದು ಗ್ರಾಮಸ್ಥರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು. ಸಿದ್ದಾಪುರದ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ಅವರೆಗುಂದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಡಿ. ಅರ್ಚನಾ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು.

ಅವರೆಗುಂದ ಗ್ರಾಮಸ್ಥರು ಮಾತನಾಡಿ ನಮ್ಮ ಹಾಡಿಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದರು. ಸರ್ಕಾರದ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇದಕ್ಕೆ ವಿದ್ಯುತ್ ಸಂಪರ್ಕ ಒದಗಿಸಿಕೊಡದೇ ಟ್ಯಾಂಕ್ ನಿಷ್ಪçಯೋಜಕವಾಗಿದೆ ಎಂದರು. ಕುಡಿಯುವ ನೀರಿಗಾಗಿ ದೂರಕ್ಕೆ ತೆರಳುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ವನ್ಯಜೀವಿಗಳ ಹಾವಳಿಯ ನಡುವೆ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಬಗೆಹರಿಸಿಕೊಡುವಂತೆ ಒತ್ತಾಯಿಸಿದರು. ಅವರೆಗುಂದ ದುಬಾರೆ ಹಾಡಿಯ ನಿವಾಸಿಗಳು ಮಾತನಾಡಿ, ಐ.ಟಿ.ಡಿ.ಪಿ ಇಲಾಖೆಯಿಂದ ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ನೀಡುವ ಪೌಷ್ಟಿಕ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ. ಪೌಷ್ಟಿಕ ಆಹಾರಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ತಹಶೀಲ್ದಾರ್ ಅವರ ಗಮನ ಸೆಳೆದರು. ಅಲ್ಲದೇ ಐ.ಟಿ.ಡಿ.ಪಿ ಇಲಾಖೆಯ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಆದಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ದುಬಾರೆ ಹಾಡಿಯ ನಿವಾಸಿ ಜೆ.ಕೆ ಡೋಬಿ ಮಾತನಾಡಿ ಗಿರಿಜನರಿಗೆ ಸರ್ಕಾರ ದಿಂದ ಮನೆಗಳು ಮಂಜೂರಾತಿ ಆಗುತ್ತಿಲ್ಲ. ಇರುವ ಮನೆಗಳ ದುರಸ್ತಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರೆಗುಂದ ಪರಿಶಿಷ್ಟ ಜಾತಿ- ಪಂಗಡಗಳ ನಿವಾಸಿಗಳು ಮಾತನಾಡಿ ತಮಗೆ ಅರಣ್ಯ ಪ್ರದೇಶದೊಳಗೆ ವಾಸಿಸುವ ಕುಟುಂಬಗಳಿಗೆ ಸಮರ್ಪಕ ವಾಗಿ ಹಕ್ಕುಪತ್ರಗಳ ಲಭಿಸಿರುವುದಿಲ್ಲ. ಹಕ್ಕುಪತ್ರ ದೊರೆತ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲವೆಂದು ತಿಳಿಸಿದರು. ಅವರೆಗುಂದ ನಿವಾಸಿಯಾಗಿರುವ ವಿಜಯ ರೈ ಮಾತನಾಡಿ, ಅರಣ್ಯ ಪ್ರದೇಶದೊಳಗೆ ತಲ ತಲಾಂತರಗಳಿAದ ವಾಸ ಮಾಡಿಕೊಂಡಿರುವ ಇತರ ಜನಾಂಗದವರಿಗೆ ಈವರೆಗೂ ಹಕ್ಕುಪತ್ರ ಲಭಿಸಿಲ್ಲವೆಂದರು. ಹಕ್ಕುಪತ್ರಕ್ಕಾಗಿ ಸಾಕಷ್ಟು ಬಾರಿ ಕಚೇರಿಗಳಿಗೆ ಅಲೆದರೂ, ಹಕ್ಕುಪತ್ರ ಈವರೆಗೂ ಲಭಿಸಿರುವುದಿಲ್ಲವೆಂದರು. ಇದಲ್ಲದೇ ಇತ್ತೀಚೆಗೆ ಅವರೆಗುಂದ ಗ್ರಾಮದಲ್ಲಿ ದರೋಡೆ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಈ ಹಿಂದೆ ಪೊಲೀಸರು ಗ್ರಾಮಕ್ಕೆ ಬಂದು ಗಸ್ತು ತಿರುಗುತ್ತಿದ್ದರು. ಇದೀಗ ಬರುತ್ತಿಲ್ಲ. ಈ ಭಾಗದಲ್ಲಿ ಕಳ್ಳತನ ಹೆಚ್ಚಾಗಿದ್ದು, ಪೊಲೀಸರು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ದುಬಾರೆಯ ನಿವಾಸಿಗಳು ಮಾತನಾಡಿ, ಹಾಡಿಗಳಲ್ಲಿ ಸಮರ್ಪಕವಾದ ವಿದ್ಯುತ್ ಸೌಲಭ್ಯವಿಲ್ಲ. ಗಂಗಾ ಕಲ್ಯಾಣ ಯೋಜನೆ ಜಾರಿಗೆ ಬಂದಿದ್ದರೂ ಹಾಡಿಗಳಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಉಪತಹಶೀಲ್ದಾರ್ ಪೊನ್ನು, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಅನಿಲ್ ಕುಮಾರ್, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ, ಪಿ.ಡಿ.ಓ ಮೋಹನ್ ಕುಮಾರ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್ ಹಾಗೂ ಕಂದಾಯ ಇಲಾಖೆಯ ಹಾಗೂ ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ ಸದಸ್ಯರುಗಳು ಹಾಗೂ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಎಂ.ಸಿ. ವಾಸು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲು ನಿರ್ಮಿಸಿದ್ದ ಟ್ಯಾಂಕ್‌ಗಳನ್ನು ತಹಶೀಲ್ದಾರ್ ಅರ್ಚನಾ ಭಟ್ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಮೇಲಾಧಿಕಾರಿಗಳ ಗಮನಕ್ಕೆ ಎಲ್ಲಾ ಸಮಸ್ಯೆಗಳನ್ನು ವರದಿ ನೀಡಲಾಗುವುದೆಂದರು. ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ರಾಜೇಂದ್ರ ಸಿಂಗ್ ರವರು ತಂದಿದ್ದ ಗಿಡಗಳನ್ನು ತಹಶೀಲ್ದಾರ್ ಅವರು ಅರಣ್ಯ ಪ್ರದೇಶದೊಳಗೆ ನೆಟ್ಟರು.