ನಾಪೋಕ್ಲು, ಜ. ೨೭: ಇದೀಗ ಕಾಫಿ ಫಸಲು ತೋಟಗಳಿಂದ ಅಂಗಳಕ್ಕಿಳಿಯುವ ಅವಧಿ. ಮಳೆ, ಮೋಡದ ಭೀತಿಯಿಂದ ತತ್ತರಿಸಿದ ರೈತರು ಬಿಸಿಲು ಕಾಣಿಸಿಕೊಂಡರೂ ನೆಮ್ಮದಿಯಿಂದ ಇರುವಂತಿಲ್ಲ. ಕಾಡಂಚಿನ ಗ್ರಾಮಗಳಲ್ಲಿನ ರೈತರು ಕಾಡಾನೆಗಳ ಕಾಟದಿಂದ ಕಂಗೆಟ್ಟಿದ್ದಾರೆ. ಪರಿಹಾರ ಕ್ರಮಗಳನ್ನು ಕೈಗೊಂಡರೂ ಮತ್ತೆಮತ್ತೆ ಉಪಟಳ ನೀಡುವ ಕಾಡಾನೆಗಳ ಹಾವಳಿ ಯಿಂದ ಚಿಂತಿತರಾಗಿದ್ದಾರೆ. ಯವಕ ಪಾಡಿ, ಪೇರೂರು, ಪಾಲಂಗಾಲ ಗ್ರಾಮ ವ್ಯಾಪ್ತಿಗಳಲ್ಲಿ ಕಾಡಾನೆಗಳು ನಿರಂತರವಾಗಿ ರೈತರಿಗೆ ತೊಂದರೆ ಕೊಡುತ್ತಲೇ ಇವೆ.

ಕಕ್ಕಬ್ಬೆ-ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಕಾಡಾನೆಗಳ ನಿಯಂತ್ರಣ ಕೈಗೊಳ್ಳುವಂತೆ ಹಾಗೂ ಗ್ರಾಮಸ್ಥರಿಗೆ ಸಂಕಷ್ಟ ತಂದೊಡ್ಡುತ್ತಿರುವ ಪುಂಡಾನೆಯನ್ನು ಸೆರೆಹಿಡಿಯುವಂತೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣಾಧಿ ಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಯವಕಪಾಡಿ ಗ್ರಾಮವು ಬ್ರಹ್ಮಗಿರಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು, ಅರಣ್ಯ ಹಕ್ಕು, ಸಮುದಾಯ ಅರಣ್ಯ ಹಕ್ಕು ಪ್ರದೇಶಗಳನ್ನು ಹೊಂದಿದೆ. ಅರಣ್ಯದಂಚಿನಲ್ಲಿ ವಾಸವಾಗಿರುವ ಗಿರಿಜನರು ಕಾಡಾನೆಗಳ ಉಪಟಳಕ್ಕೆ ಕಂಗೆಟ್ಟಿದ್ದಾರೆ. ಜಿಲ್ಲೆಯ ಅತ್ಯಂತ ಎತ್ತರದ ಶಿಖರ ಎಂಬ ಖ್ಯಾತಿಯ ತಡಿಯಂಡಮೋಳ್ ಬೆಟ್ಟ ಶ್ರೇಣಿಯು ಈ ವ್ಯಾಪ್ತಿಯಲ್ಲಿದ್ದು, ಪ್ರವಾಸಿಗರು ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿ ಕೃಷಿ ಫಸಲು ನಾಶವಾಗುತ್ತಿದ್ದು ರೈತರ ನೆಮ್ಮದಿಯನ್ನು ಕಸಿದಿದೆ. ಮೂರು ಮಂದಿ ಗ್ರಾಮಸ್ಥರು ಕಾಡಾನೆಗಳ ತುಳಿತಕ್ಕೆ ಬಲಿಯಾಗಿ ದ್ದಾರೆ. ಕೃಷಿಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ವಾಹನ ಚಾಲಕರು ಈ ವ್ಯಾಪ್ತಿಯಲ್ಲಿ ಭಯದಿಂದ ಸಂಚರಿಸುವAತಾಗಿದೆ. ಹಾಡಹಗಲೇ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು ಜನರು ಪ್ರಾಣಾಪಾಯದಿಂದ ಪಾರಾಗುತ್ತಿರುವ ಘಟನೆಗಳೂ ವರದಿಯಾಗುತ್ತಿವೆ.

ಇನ್ನು ಪಾಲಂಗಾಲ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಒಂಟಿ ಸಲಗವೊಂದು ಇನ್ನಿಲ್ಲದ ಉಪಟಳ ನೀಡುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ನೀರಿನ ಸಂಗ್ರಹ ಇಲ್ಲದಿರುವುದರಿಂದ ಕಾಫಿ ಬೆಳೆಗಾರರು ತೆಗೆಸಿರುವ ಕೆರೆಗಳೇ ಕಾಡಾನೆಗಳ ನೆಚ್ಚಿನ ತಾಣವಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗಟ್ಟಿದರೂ ಮತ್ತೆ ಮತ್ತೆ ನಾಡಿಗೆ ವಾಪಾಸ್ಸಾಗುತ್ತಿವೆ ಎನ್ನುತ್ತಾರೆ ಗ್ರಾಮಸ್ಥರು. ಅರಣ್ಯ ಇಲಾಖೆಯ ಇನ್ನಿಲ್ಲದ ಶ್ರಮದ ನಡುವೆಯೂ ರೈತರ ಬವಣೆ ತಪ್ಪಿಲ್ಲ. ಮಲೆತಿರಿಕೆ ಬೆಟ್ಟದಿಂದ ಚೇಲಾವರ ಬೆಟ್ಟದವರೆಗೆ ಸರ್ಕಾರದ ಆನೆ ಟ್ರೆಂಚ್ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಗ್ರಾಮದ ರೈತರ ಮಕ್ಕಳು ಬೆಂಗಳೂರಿನಲ್ಲಿ ಶಿಕ್ಷಣ, ಉದ್ಯೋಗದಲ್ಲಿದ್ದು, ರಾತ್ರಿ ವೇಳೆ ಪಯಣಿಸುವವರನ್ನು ಭಯದಿಂದಲೇ ಕರೆತರುವ ಪರಿಸ್ಥಿತಿ ಇದೆ. ಕಾಡಾನೆಗಳ ಉಪಟಳದಿಂದ ಗ್ರಾಮದಲ್ಲಿ ಹಣ್ಣಿನ ಗಿಡಗಳು, ಭತ್ತ, ಬಾಳೆ, ತೆಂಗು ಮತ್ತಿತರ ಕೃಷಿಭೂಮಿ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ನಿವೃತ್ತ ಪ್ರಾಂಶುಪಾಲರಾದ ಸುಲೋಚನ.

ಪೇರೂರು ಗ್ರಾಮದಲ್ಲೂ ರೈತರು ಕಾಡಾನೆಗಳ ಉಪಟಳದಿಂದ ಬಸವಳಿದಿದ್ದಾರೆ. ಕಾಫಿ ಇಳುವರಿಯನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಗ್ರಾಮದಲ್ಲಿ ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದಿಂದ ಪರಿಹಾರ ಸಿಕ್ಕಿದೆ. ದೀಪಾವಳಿ, ಹುತ್ತರಿ ಹಬ್ಬಕ್ಕೆ ಪಟಾಕಿ ಸಿಡಿಸದೇ ರಾತ್ರಿ ಹೊತ್ತು ಆನೆಗಳು ಮನೆ, ತೋಟದ ಬಳಿ ಸುಳಿಯದಂತೆ ಪಟಾಕಿ ಸಿಡಿಸುವಂತಾಗಿದೆ. ಪರಿಹಾರದ ಹಣ ಪಟಾಕಿ ಖರೀದಿಗೆ ಬಳಕೆಯಾಗಿದೆ ಎನ್ನುತ್ತಾರೆ ಪೇರೂರು ಗ್ರಾಮದ ರೈತ ಜಯ. ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಫಸಲುಗಳನ್ನು ನಾಶಮಾಡುತ್ತಿವೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಾಡಾನೆಗಳ ಪಾಲಾಗುತ್ತಿದೆ. ನಿರಂತರ ವಾದ ಸಮಸ್ಯೆಗಳ ಅಡಿಯಲ್ಲಿ ಬದುಕು ಸಾಗಿಸುವಂತಾಗಿದೆ ಎನ್ನುತ್ತಾರೆ ಅವರು.

ಅರಣ್ಯ ಸಂರಕ್ಷಣಾಧಿಕಾರಿಗಳು ಯವಕಪಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿಕರು ಬೆಳೆದ ಏಲಕ್ಕಿ, ಕಾಫಿ, ಬಾಳೆ, ಅಡಿಕೆ ನಾಶವಾಗಿದ್ದು, ಸೂಕ್ತ ಪರಿಹಾರವನ್ನು ಒದಗಿಸಬೇಕು. ಅರಣ್ಯದಂಚಿನಲ್ಲಿರುವ ಗಿರಿಜನರ ಹಾಡಿಗೆ ತೆರಳುವ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಕಾವೇರಪ್ಪ, ರಮೇಶ್, ಪೊನ್ನಪ್ಪ, ಸೋಮಣ್ಣ ಮತ್ತಿತರರು ಒತ್ತಾಯಿಸಿದ್ದಾರೆ.

-ಸಿ.ಎಸ್.