ಮಡಿಕೇರಿ, ಜ. ೨೬: ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳ ಪೈಕಿ ಕೊಡಗು ಜಿಲ್ಲೆಗೆ ಈ ತನಕ ಒಂದು ಪದ್ಮಭೂಷಣ ಸೇರಿದಂತೆ ಮೂರು ಪದ್ಮಶ್ರೀ ಬಿರುದು ಬಂದಿರುವುದು ಜಿಲ್ಲೆಗೆ ಸಂದಿರುವ ಹಿರಿಮೆಯಾಗಿದೆ.

ಭಾರತೀಯ ಸೇನೆಯಲ್ಲಿನ ಸೇವೆಗಾಗಿ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರಿಗೆ ಪದ್ಮಭೂಷಣ ಬಿರುದು ದೊರೆತಿದೆ. ಇದಲ್ಲದೆ ನಾಲ್ಕನೆಯ ಅತ್ಯುನ್ನತ ಬಿರುದಾಗಿರುವ ಪದ್ಮಶ್ರೀ ಪ್ರಶಸ್ತಿಯನ್ನು ಜಿಲ್ಲೆಯ ಮೂವರು ಪಡೆದುಕೊಂಡಿದ್ದಾರೆ. ೧೯೭೩ರ ಅವಧಿಯಲ್ಲಿ ಶಿಕ್ಷಣ ತಜ್ಞೆಯಾಗಿ ಗುರುತಿಸಲ್ಪಟ್ಟಿದ್ದ ಮಡಿಕೇರಿ ಯವರಾದ ಕೋದಂಡ ರೋಹಿಣಿ ಪೂವಯ್ಯ ಅವರಿಗೆ ಶಿಕ್ಷಣ ಹಾಗೂ ಸಾಮಾಜಿಕ ಸೇವೆಗೆ ಪದ್ಮಶ್ರೀ ಬಿರುದು ದೊರೆತಿತ್ತು. ಪ್ರಸ್ತುತ ಇವರು ದೈವಾಧೀನರಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಹಾಕಿಪಟು, ಒಲಂಪಿಯನ್ ಮೊಳ್ಳೆರ ಪಿ. ಗಣೇಶ್ ಅವರಿಗೆ ಕ್ರೀಡಾ ಸಾಧನೆಗಾಗಿ ಪದ್ಮಶ್ರೀ ಬಿರುದು ಲಭ್ಯವಾಗಿದೆ. ಇದೀಗ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಜಾನಪದ ಸೇವೆಗಾಗಿ ಪದ್ಮಶ್ರೀ ಬಿರುದು ದೊರೆತಿದ್ದು, ಇದು ಕೊಡಗಿಗೆ ಸಂದಿರುವ ಮೂರನೆಯ ಪ್ರಶಸ್ತಿಯಾಗಿದೆ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಪೈಕಿ ಭಾರತರತ್ನ ಪ್ರಥಮ, ಪದ್ಮವಿಭೂಷಣ್ ದ್ವಿತೀಯ, ಪದ್ಮಭೂಷಣ್ ತೃತೀಯ ಹಾಗೂ ಪದ್ಮಶ್ರೀ ನಾಲ್ಕನೆಯ ಅತ್ಯುನ್ನತ ಪ್ರಶಸ್ತಿಯಾಗಿದೆ.