ಮಡಿಕೇರಿ, ಜ. ೨೬: ೨೦೨೩ ಕರ್ನಾಟಕ ವಿಧಾನಸಭೆಯ ಚುನಾವಣಾ ವರ್ಷವಾಗಿದೆ. ಇನ್ನೇನು ಕೆಲವೇ ಸಮಯದಲ್ಲಿ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದ್ದು, ರಾಜ್ಯ ವ್ಯಾಪ್ತಿಯಾಗಿ ಚುನಾವಣೆಯ ಕಲರವ ಈಗಾಗಲೇ ಪ್ರಾರಂಭವಾಗಿದೆ.

ರಾಜ್ಯದಲ್ಲಿ ಮುಂದಿನ ಸರಕಾರ ಯಾರದ್ದು ಎಂಬ ಜಿಜ್ಞಾಸೆಯಲ್ಲಿ ರಾಜಕೀಯ ಚರ್ಚೆಗಳು ಸದ್ಯದ ಕುತೂಹಲವಾದ ವಿಚಾರವಾಗಿ ಪರಿಣಮಿಸಿದೆ. ೨೦೧೮ ರಲ್ಲಿ ನಡೆದಿದ್ದ ಚುನಾವಣೆ, ಆ ಸಂದರ್ಭದಲ್ಲಿ ಹೊರಬಿದ್ದಿದ್ದ ಫಲಿತಾಂಶ, ರಾಜಕೀಯ ಪಕ್ಷಗಳತ್ತ ಮತದಾರ ನೀಡಿದ್ದ ತೀರ್ಪು, ರಾಜ್ಯದಲ್ಲಿ ಸರಕಾರ ರಚನೆಯಿಂದ ಹಿಡಿದು ಈತನಕ ನಡೆದಿರುವ ವಿದ್ಯಮಾನಗಳನ್ನು ಜನರು ಮೆಲುಕು ಹಾಕುತ್ತಿದ್ದಾರೆ. ಇದರಲ್ಲಿ ಕೊಡಗು ಜಿಲ್ಲೆಯೂ ಹೊರತಾಗಿಲ್ಲ. ಪ್ರಸ್ತುತ ವಿವಿಧ ಸಭೆ, ಸಮಾರಂಭಗಳಲ್ಲಿ ಅಲ್ಲಲ್ಲಿ ಜನರು ಗುಂಪು ಸೇರುವ ಸಂದರ್ಭದಲ್ಲಿ ರಾಜಕೀಯ ವಿಚಾರಗಳೇ ಚರ್ಚೆಯ ವಿಚಾರವಾಗಿದೆ.

ಈ ಬಾರಿ ಕೊಡಗಿನಲ್ಲಿ ಏನಾಗಬಹುದು, ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಬಹುದು ಎಂಬುದು ಕೇವಲ ಜನತೆಗೆ ಮಾತ್ರ ಕುತೂಹಲವಾಗಿ ಉಳಿದಿಲ್ಲ. ಆಯಾ ರಾಜಕೀಯ ಪಕ್ಷಗಳಿಗೂ ಇದು ಗಂಭೀರವಾದ ವಿಚಾರವಾಗಿದೆ. ಪ್ರಮುಖ ಪಕ್ಷಗಳಾದ ಬಿ.ಜೆ.ಪಿ., ಕಾಂಗ್ರೆಸ್ ಹಾಗೂ ಜೆ.ಡಿ.ಎಸ್.ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪ್ರಯತ್ನಗಳು ದಿನೇದಿನೇ ಹೆಚ್ಚಾಗುತ್ತಿವೆ. ಟಿಕೆಟ್ ಆಕಾಂಕ್ಷಿಗಳ ಪ್ರಯತ್ನ ಒಂದೆಡೆಯಾದರೆ ಆಯಾ ಪಕ್ಷಗಳಲ್ಲೂ ಚುನಾವಣೆಗೆ ಪೂರ್ವ ತಯಾರಿ ಕಳೆದ ಹಲವು ಸಮಯದಿಂದಲೇ ಚುರುಕುಗೊಂಡಿವೆ. ಅಲ್ಲಲ್ಲಿ ರಾಜಕೀಯ ಸಭೆ - ಸಮಾರಂಭಗಳು ಹೆಚ್ಚಾಗುತ್ತಿವೆ. ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಬೆಂಬಲಿಗರೊAದಿಗೆ ‘ಟಿಕೆಟ್ ಲಾಬಿ’ಯ ಕಸರತ್ತಿನಲ್ಲಿದ್ದಾರೆ. ಜಿಲ್ಲೆಯಿಂದ, ರಾಜ್ಯ, ರಾಷ್ಟçಮಟ್ಟದವರೆಗೂ ಈ ಪ್ರಯತ್ನ ಮುಂದುವರಿದಿದೆ.

ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಬಿ.ಜೆ.ಪಿ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸ್ವಂತ ಬಲದಿಂದ ಸರಕಾರ ರಚನೆ ಸಾಧ್ಯವಾಗಲಿಲ್ಲ. ಇದರ ಲಾಭ ಪಡೆದ ಕಾಂಗ್ರೆಸ್ - ಜೆ.ಡಿ.ಎಸ್. ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರಕಾರ ರಚಿಸಿದ್ದು, ಜೆ.ಡಿ.ಎಸ್. ಕಡಿಮೆ ಸಂಖ್ಯಾ ಬಲ ಹೊಂದಿದ್ದರೂ ತಮ್ಮ ನಾಯಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವಲ್ಲಿ ಆರಂಭದಲ್ಲಿ ಯಶಸ್ಸು ಕಂಡಿತ್ತು. ಆದರೆ ಈ ಸರಕಾರ ಹೆಚ್ಚು ಸಮಯ ಮುಂದುವರಿಯಲಿಲ್ಲ. ರಾಜಕೀಯ ಕ್ಷೆÆÃಬೆಗಳೇ ನಡೆದು ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿದಿದ್ದರು. ನಂತರದಲ್ಲಿ ಕಾಂಗ್ರೆಸ್ - ಜೆ.ಡಿ.ಎಸ್.ನ ಹಲವು ಶಾಸಕರನ್ನು ತನ್ನತ್ತ ಸೆಳೆದುಕೊಂಡ ಬಿ.ಜೆ.ಪಿ. ಅವರುಗಳ ಸಹಕಾರದೊಂದಿಗೆ ಅಧಿಕಾರಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಸಿ.ಎಂ. ಪಟ್ಟದಲ್ಲಿ ಕೂರಿಸಿತ್ತು. ಆದರೂ ಸುಲಲಿತವಾಗಿ ಅಧಿಕಾರ ನಡೆಸಲು ಹತ್ತು-ಹಲವಾರು ರಾಜಕೀಯ ಪ್ರಹಸನಗಳು ಅಡ್ಡಿಯಾದವು. ಆಂತರಿಕ ವಿಚಾರದ ಹಿನ್ನೆಲೆಯಲ್ಲಿ ನಂತರದಲ್ಲಿ ಯಡಿಯೂರಪ್ಪ ಅವರೇ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಎದುರಾಗಿತ್ತು. ತದನಂತರದಲ್ಲಿ ಬಿ.ಜೆ.ಪಿ. ಆಡಳಿತವೇ ಮುಂದುವರಿದಿದ್ದು, ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಗಿರಿ ಒಲಿದುಬಂದಿತ್ತು. ಇದೀಗ ಒಟ್ಟು ಐದು ವರ್ಷಗಳ ಅಧಿಕಾರವಧಿ ಪೂರ್ಣಗೊಳ್ಳುತ್ತಾ ಬಂದಿದ್ದು ಮತ್ತೊಂದು ಮತ ಸಮರ ಸನ್ನಿಹಿತವಾಗುತ್ತಿದೆ.

ಐದು ವರ್ಷಗಳಲ್ಲಿ ಘಟಿಸಿರುವ ರಾಜಕೀಯ ವಿದ್ಯಮಾನಗಳೆಲ್ಲವನ್ನೂ ಅರಿತಿರುವ ಜನರು ಈ ಬಾರಿ ಏನಾಗಲಿದೆ ಎಂಬ ಕುತೂಹಲದಲ್ಲಿರುವುದು ಸಹಜವೇ ಆಗಿದೆ. ಮುಂದಿನ ದಿನಗಳು ರಾಜ್ಯಾದ್ಯಂತ ರಾಜಕೀಯದ ಪರ್ವಕಾಲವಾಗಲಿದೆ.

ಟಿಕೆಟ್ ಅವರಿಗೆ ಸಿಗಲಿದೆ... ಇವರು ಈ ಬಾರಿ ಪ್ರಭಾವಿಗಳಾಗಿದ್ದಾರೆ... ಹಳಬರೇ... ಹೊಸ ಮುಖಗಳು ಅವಕಾಶ ಪಡೆಯಲಿವೆಯೇ... ಹಾಲಿ ಆಡಳಿತ ಪಕ್ಷಕ್ಕೆ ಯಾರು ಸಡ್ಡು ಹೊಡೆಯಬಹುದು... ಹಾಲಿ ಪಕ್ಷವೇ ಮತ್ತೊಮ್ಮೆ ಬರಬಹುದೇ... ಎಂಬಿತ್ಯಾದಿ ಮಾತು - ಚರ್ಚೆಗಳು ಏನಿದ್ದರೂ ಸದ್ಯದ ಮಟ್ಟಿಗೆ ಅಂತೆ - ಕಂತೆಗಳಷ್ಟೇ... ಇದಕ್ಕಿನ್ನೂ ಕೆಲ ಸಮಯ ಕಾಯಲೇಬೇಕಿದೆ.