ಕುಶಾಲನಗರ, ಜ. ೨೫: ಉತ್ತರ ಕೊಡಗಿನ ಗಡಿ ಗ್ರಾಮ ಶಿರಂಗಾಲ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಾಲಯವನ್ನು ರೂ. ೨.೭೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕೈಗೊಂಡಿದ್ದು, ತಾ. ೨೬ ರಿಂದ (ಇಂದಿನಿAದ) ನಾಲ್ಕು ದಿನಗಳ ಕಾಲ ಶ್ರೀಮಂಟಿಗಮ್ಮ ದೇವಾಲಯ ಉದ್ಘಾಟನೆ, ದೇವಿಯ ವಿಗ್ರಹ ಪ್ರತಿಷ್ಠಾಪನೆ, ಕಳಶ ಸ್ಥಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆ ಯಿಂದ ನಡೆಯಲಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಟಿಗಮ್ಮ ದೇವಾಲಯ ಪವಿತ್ರ ಧಾರ್ಮಿಕ ಕೇಂದ್ರ ಹಾಗೂ ಪ್ರೇಕ್ಷಣೀಯ ಸ್ಥಳವಾಗಿ ರೂಪು ಗೊಂಡಿದೆ. ನಾಲ್ಕು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ನದಾಸೋಹ ನಡೆಯಲಿದೆ. ಈ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ. ಸತೀಶ್ ಅವರು ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ದೇವಾಲಯದ ಹಣಕಾಸು ಸಮಿತಿ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಮಾತನಾಡಿ, ದೇವಾಲಯದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ನೂರು ಅಡಿ ಉದ್ದ ಹಾಗೂ ಐವತ್ತು ಅಡಿ ಅಗಲ ವಿಸ್ತೀರ್ಣದಲ್ಲಿ ದಾನಿಗಳ ಸಹಕಾರದಿಂದ ನೂತನ ದೇವಾಲ ಯಕ್ಕೆ ರೂ. ೨.೭೫ ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ ಎಂದರು. ದೇವಾಲಯದ ಮುಂಭಾಗದಲ್ಲಿ ಗರುಡಗಂಭ ಹಾಗೂ ಸುಂದರವಾದ ನೀರಿನ ಕಾರಂಜಿವುಳ್ಳ ಉದ್ಯಾನ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕಟ್ಟಡ ವಾಸ್ತುಶಿಲ್ಪಿ ಆರ್.ಆರ್. ಕುಮಾರ್ ಹಕ್ಕೆ ಮಾತನಾಡಿ, ಗ್ರಾಮದ ಶಕ್ತಿ ದೇವತೆ ಮಂಟಿಗಮ್ಮ ದೇವಾಲ ಯದ ಅಭಿವೃದ್ಧಿಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣ ಗೊಳಿಸಲಾಗಿದೆ. ದೇವಾಲಯ ಹಾಗೂ ಗೋಪುರವನ್ನು ಸುಂದರವಾಗಿ ರೂಪುಗೊಳಿಸಲಾಗಿದೆ ಎಂದರು.

ಕಟ್ಟಡ ಸಮಿತಿ ಅಧ್ಯಕ್ಷ ಎಸ್.ಕೆ. ಪ್ರಸನ್ನ, ನಿರ್ದೇಶಕ ಸಿ.ಎ. ಲೋಕೇಶ್ ಮಾತನಾಡಿದರು.

ಗೋಷ್ಠಿಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ರುದ್ರಪ್ಪ, ಕಾರ್ಯದರ್ಶಿ ಎಸ್.ಎಸ್. ಮಹೇಶ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಿ.ಎಸ್. ಬಸವಣ್ಣಯ್ಯ, ಮುಖಂಡರಾದ ಎಸ್.ಸಿ. ಹಲಗಪ್ಪ, ಎಸ್.ಪಿ. ಚೇತನ್, ರವಿ, ರಮೇಶ್, ಜಯಪ್ರಕಾಶ್, ಶಿವಾನಂದ ಇದ್ದರು.