ಪೊನ್ನಂಪೇಟೆ, ಜ. ೨೪: ನೂತನ ಶಿಕ್ಷಣ ನೀತಿಗೆ ಅನುಸಾರವಾಗಿ, ಮಾದರಿ ಪ್ರಶ್ನೆ ಪತ್ರಿಕೆ ತಯಾರಿ ಮತ್ತು ಮೌಲ್ಯ ಮಾಪನದ ಬಗ್ಗೆ ಪಿಯುಸಿ ಇತಿಹಾಸ ಪಠ್ಯ ಬೋಧನೆ ಮಾಡುವ ಉಪನ್ಯಾಸಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಇತಿಹಾಸ ಕಾರ್ಯಾ ಗಾರವನ್ನು ಆಯೋಜಿಸಲಾಗಿತ್ತು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಗೋಣಿ ಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಉದ್ಘಾಟಿಸಿ ಮಾತನಾಡಿ, ಚರಿತ್ರೆಯನ್ನು ತಿಳಿಯದವನು ಚರಿತ್ರೆಯನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಇತಿಹಾಸವನ್ನು ತಿಳಿದುಕೊಳ್ಳುವು ದರಿಂದ ಹಿಂದೆ ಆಗಿರುವ ಪ್ರಮಾದಗಳನ್ನು ಸರಿಪಡಿಸಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಉಪನ್ಯಾಸಕರು ಅಧ್ಯಯನಶೀಲ ಹಾಗೂ ಅನ್ವೇಷಣಾಶೀಲರಾಗುವ ಮೂಲಕ ಜ್ಞಾನವಂತರಾಗಿ, ತಾವು ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆಯಬೇಕು ಎಂದರು. ಮತ್ತೊಬ್ಬ ಅತಿಥಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ. ಪುಟ್ಟರಾಜು ಮಾತನಾಡಿ, ಹೊಸ ಶಿಕ್ಷಣ ನೀತಿಗೆ ಅನುಸಾರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ, ಅದರ ಪ್ರಕಾರ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಮಾಡಬೇಕು. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೊಡಗು ೬ನೇ ಸ್ಥಾನ ಪಡೆದು ಕೊಂಡಿತ್ತು. ಈ ಬಾರಿ ಉಪನ್ಯಾಸಕರು ಹೆಚ್ಚು ಶ್ರಮ ವಹಿಸುವ ಮೂಲಕ ವಿದ್ಯಾರ್ಥಿಗಳನ್ನು ಸೂಕ್ತ ರೀತಿಯಲ್ಲಿ ಪರೀಕ್ಷೆಗೆ ತಯಾರಿಗೊಳಿಸಬೇಕು ಎಂದರು. ಈ ಸಂದರ್ಭ ಕಾವೇರಿ ಕಾಲೇಜಿನ ವತಿಯಿಂದ ಪುಟ್ಟರಾಜು ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜು ಇತಿಹಾಸ ಉಪನ್ಯಾಸಕ ಪಿ.ಆರ್. ಶಿವದಾಸ್, ಶ್ರೀಮಂಗಲ ಸರ್ಕಾರಿ ಪ.ಪೂ. ಕಾಲೇಜು ಉಪನ್ಯಾಸಕ ಹೆಚ್.ಜೆ. ನಾಗರಾಜ್, ಭಾಗಮಂಡಲ ಪದವಿಪೂರ್ವ ಕಾಲೇಜು ಉಪನ್ಯಾಸಕ ಕೆ.ಎನ್. ಸುರೇಂದ್ರ ಕುಮಾರ್, ಸೋಮವಾರಪೇಟೆ ಸರ್ಕಾರಿ ಪ.ಪೂ. ಕಾಲೇಜು ಉಪನ್ಯಾಸಕಿ ಎಂ.ಬಿ. ತಿಲೋತಮೆಯವರು ಮಾದರಿ ಪ್ರಶ್ನೆ ಪತ್ರಿಕೆ ತಯಾರಿ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮ ಸಂಚಾಲಕ ರಾದ ಉಪನ್ಯಾಸಕಿ ಪಿ.ಸಿ. ಮೀನಾಕ್ಷಿ ಸ್ವಾಗತಿಸಿ, ಉಪನ್ಯಾಸಕ ಶಿವದಾಸ್ ವಂದಿಸಿ, ವಿದ್ಯಾರ್ಥಿಗಳಾದ ವೈಷ್ಣವಿ ಮತ್ತು ಪ್ರತಿಭಾ ನಿರೂಪಿಸಿದರು.