ಮಡಿಕೇರಿ, ಜ. ೨೩: ಕೊಡಗು ಜಿಲ್ಲೆ ಅಂದರೆ ಎಲ್ಲರ ಕಣ್ಮುಂದೆ ಸುಳಿಯುವದು ಅಲ್ಲಿನ ಪರಿಸರ., ಕೃಷಿ ಭೂಮಿ, ನದಿ-ತೊರೆ, ಜಲಪಾತಗಳು., ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಈ ಹಿಂದೆ ಯಾವದೇ ಪ್ರದೇಶಗಳಿಗೆ ತೆರಳಿದರೂ ಮೊದಲು ಸ್ವಾಗತ ಕೋರುವದು ಜಾನುವಾರುಗಳ ಬಳಗ., ಗ್ರಾಮೀಣ ಪ್ರದೇಶಗಳಿಗೆ ತೆರಳುವಾಗ ಅಲ್ಲೆಲ್ಲೋ ಕಾಡು ಮಧ್ಯದಿಂದ ‘ಅಂಬಾ..’ ಎಂಬ ಕೂಗು ಕೇಳಿದರೆ ಸಾಕು ನಾವು ಊರು ತಲಪಿದೆವು ಎಂಬದು ಖಾತರಿಯಾಗುತ್ತಿತ್ತು. ಆದರೆ., ಬರಬರುತ್ತಾ ರೈತ ಬೆಳೆಯುವ ಕೃಷಿ ಫಸಲಿಗೆ ಬೆಲೆಯಿಲ್ಲದೆ ನಷ್ಟಕ್ಕೊಳಗಾಗುತ್ತಲೇ ಕೃಷಿಯತ್ತ ಅನಾದರದಿಂದಾಗಿ ಭತ್ತ ಬೆಳೆಯುವ ಗದ್ದೆಗಳು ಪಾಳು ಬೀಳುವಂತಾಯಿತು. ಇದರಿಂದಾಗಿ ಜಾನುವಾರುಗಳ ಸಾಕಾಣಿಕೆಯಲ್ಲಿಯೂ ನಿರಾಸಕ್ತಿಯೊಂದಿಗೆ ಜಾನುವಾರುಗಳ ಸಂಖ್ಯೆಯಲ್ಲಿಯೂ ಇಳಿಮುಖಗೊಳ್ಳುವಂತಾಯಿತು., ಇದೀಗ ‘ಗೋಮಾತೆ’ಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರಕಾರ ಪ್ರತಿ ಜಿಲ್ಲೆಯಲ್ಲಿಯೂ ಗೋಶಾಲೆ ನಿರ್ಮಾಣ ಮಾಡುವ ಯೋಜನೆಯನ್ನು ಜಾರಿಗೆ ತಂದಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ಗೋಶಾಲೆಯೊಂದನ್ನು ನಿರ್ಮಾಣ ಮಾಡಲಾಗಿದ್ದು, ಹಲವು ಎಡರು-ತೊಡರುಗಳೊಂದಿಗೆ ಗೋ ಪಾಲನೆಯೊಂದಿಗೆ ಮುನ್ನಡೆಯುತ್ತಿದೆ..!

ಅವನತಿಯ ಹಾದಿಯನ್ನು ತುಳಿಯುತ್ತಿರುವ ‘ಕಾಮಧೇನು’ ಎಂದೇ ನಾಮಾಂಕಿತವಾಗಿರುವ ಗೋವುಗಳನ್ನು ಸಂರಕ್ಷಣೆ ಮಾಡುವ ಉದ್ದೇಶದೊಂದಿಗೆ ಸರಕಾರ ರಾಜ್ಯದಾದ್ಯಂತ ಗೋಶಾಲೆಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ಗೋಶಾಲೆ ನಿಮಾಣ ಮಾಡಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸನಿಹದ ಕೆ. ನಿಡುಗಣೆ ಗ್ರಾಮದ (ಅಬ್ಬಿಫಾಲ್ಸ್ ರಸ್ತೆ) ೨೪ ಎಕರೆ ಸರಕಾರೀ ಜಾಗದಲ್ಲಿ ಸದ್ಯಕ್ಕೆ ೮ ಎಕರೆ ಜಾಗವನ್ನು ಗೋಶಾಲೆಗೆಂದು ಮೀಸಲಿರಿಸಲಾಗಿದ್ದು, ರೂ.೫೩ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶಾಲೆಯನ್ನು ಕಳೆದ ಅಕ್ಟೋಬರ್ ೧೦ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಉದ್ಘಾಟನೆ ಮಾಡಿದರು. ಸಂಪೂರ್ಣ ಕಾಡುಮಯವಾಗಿರುವ, ರಸ್ತೆ ಬದಿಯಲ್ಲಿರುವ ಜಾಗದಲ್ಲಿ

ಈ ಸರಕಾರೀ ಗೋಶಾಲೆ ತಲೆಯೆತ್ತಿ ನಿಂತಿದೆ.

(ಮೊದಲ ಪುಟದಿಂದ)

ನಿರ್ವಹಣೆಯ ತಲೆಬಿಸಿ.!

ಕೆ.ನಿಡುಗಣೆ ವ್ಯಾಪ್ತಿಯಲ್ಲಿರುವ ಒಟ್ಟು ೨೪ ಎಕರೆ ಪೈಕಿ ೮ಎಕರೆಯನ್ನು ಮಾತ್ರ ಸದ್ಯಕ್ಕೆ ಗೋಶಾಲೆಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಮಂಜೂರು ಮಾಡಲಾಗಿದೆ. ನೀಡಲಾದ ಜಾಗದಲ್ಲಿ ಗೋವುಗಳಿಗೆ ತಂಗುವ ವ್ಯವಸ್ಥೆ, ಮೇವು ಸಂಗ್ರಹಣಾ ಕೊಠಡಿ, ಕಚೇರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ ಜಾಗದ ಸುತ್ತಲೂ ಸುಮಾರು ನಾಲ್ಕು ಎಕರೆಯಷ್ಟು ಜಾಗಕ್ಕೆ ಬೇಲಿ ಹಾಕಿಕೊಳ್ಳಲಾಗಿದೆ. ಬಾಕಿ ಉಳಿದ ಜಾಗಕ್ಕೆ ಬೇಲಿ ನಿರ್ಮಾಣ ಮಾಡುವದು ತ್ರಾಸದಾಯಕವಾಗಿದೆ. ಸರಕಾರದಿಂದ ಬಿಡುಗಡೆಯಾದ ಹಣದಲ್ಲಿ ಒಂದಿಷ್ಟು ಉಳಿಕೆಯಾಗಿದ್ದರೂ ಆದೇಶದ ಪ್ರಕಾರ ಅದನ್ನು ಬೇಲಿ ನಿರ್ಮಾಣಕ್ಕೆ ಬಳಸಿಕೊಳ್ಳುವಂತಿಲ್ಲ. ಅದು ಗೋವುಗಳ ಪಾಲನೆಗೆ ಮಾತ್ರ ಬಳಕೆಯಾಗಬೇಕಾಗಿದೆ. ಹಾಗಾಗಿ ಬೇಲಿ ನಿರ್ಮಾಣ ಮಾಡಿ ಜಾಗ ಸಂರಕ್ಷಣೆ ಮಾಡಿಕೊಳ್ಳುವದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ..!

ಹೆಚ್ಚುವರಿ ಮೊತ್ತಕ್ಕೆ ಪ್ರಸ್ತಾವನೆ

ಇತ್ತ ಇರುವ ಮೊತ್ತದಲ್ಲಿ ಗೋವುಗಳ ಸಂರಕ್ಷಣೆಯೊAದಿಗೆ ಮೀಸಲಿರಿಸಲಾಗಿರುವ ಜಾಗವನ್ನು ರಕ್ಷಣೆ ಮಾಡುವ ಜವಾಬ್ದಾರಿ ಪಶುಪಾಲನಾ ಇಲಾಖೆ ಹಾಗೂ ಪ್ರಾಣಿ ದಯಾಸಂಘದ ಮೇಲಿದೆ. ಈ ಬಗ್ಗೆ ಸಭೆ ನಡೆಸಿ ಚರ್ಚೆ ಮಾಡಿದ ಬಳಿಕ ಜಾಗ ಸಂರಕ್ಷಣೆಗಾಗಿ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಾಣಿ ದಯಾ ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳ ಮುಖೇನ ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ.

ಒಂದಿಷ್ಟು ಒತ್ತುವರಿ..!

ನಿಡುಗಣೆ ವ್ಯಾಪ್ತಿಯಲ್ಲಿ ೨೪ ಎಕರೆ ಸರಕಾರೀ ಜಾಗವಿದ್ದರೂ ಅದರಲ್ಲಿ ಸದ್ಯಕ್ಕೆ ೮ ಎಕರೆ ಮಾತ್ರ ಗೋಶಾಲೆಗೆ ಮೀಸಲಾಗಿದೆ. ಇನ್ನುಳಿದ ಜಾಗವೂ ಇದೇ ಶಾಲೆಗೆ ಮಂಜೂರಾಗಲಿದೆ. ಆದರೆ, ಖಾಲಿ ಇರುವ ಜಾಗದ ಪೈಕಿ ಒಂದಿಷ್ಟು ಜಾಗ ಈಗಾಗಲೇ ಒತ್ತುವರಿಯಾಗಿರುವದಾಗಿ ಸ್ಥಳೀಯರು ಹೇಳುತ್ತಾರೆ. ಈ ಜಾಗದ ಒತ್ತಿನಲ್ಲೇ ದೇವರಕಾಡಿಗೆ ಸಂಬAಧಿಸಿದ ಜಾಗವೂ ಇದ್ದು, ಈ ಜಾಗಕ್ಕೆ ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಹಾಗೂ ಪಶುಪಾಲನಾ ಇಲಾಖೆ ಮೂಲಕ ಚೈನ್ ಲಿಂಕ್ ಬೇಲಿ ನಿರ್ಮಾಣ ಮಾಡಿ ಹದ್ದುಬಸ್ತು ಮಾಡಲಾಗಿದೆ. ಬಾಕಿ ಉಳಿದ ಜಾಗವನ್ನು ರಕ್ಷಣೆ ಮಾಡಬೇಕಾಗಿದೆ.

೨೦ ಜಾನುವಾರುಗಳಿವೆ

ಸರಕಾರಿ ಗೋಶಾಲೆಯಲ್ಲಿ ಪ್ರಸ್ತುತ ೨೦ ಜಾನುವಾರುಗಳನ್ನು ಪೋಷಿಸಲಾಗುತ್ತಿದೆ. ಗೋವುಗಳಿಗೆ ಬೇಕಾದ ದಿನನಿತ್ಯದ ಹುಲ್ಲು, ಆಹಾರ, ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ. ಜಾನುವಾರಗಳ ಪೋಷಣೆಗಾಗಿ ಓರ್ವ ಮಹಿಳೆ ಸೇರಿದಂತೆ ಮೂವರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಸುರೇಶ್ ಭಟ್ ಹಾಗೂ ಗೋಶಾಲೆಯ ಉಸ್ತುವಾರಿ ಡಾ. ಪ್ರಸನ್ನ, ಪ್ರಾಣಿ ದಯಾ ಸಂಘದ ಪದಾಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಶಾಲೆಗಳಿಗೆ ಬೇಕಾದ ಅವಶ್ಯಕತೆಗಳ ಬಗ್ಗೆ ಚರ್ಚೆ ನಡೆಸುತ್ತಿರುತ್ತಾರೆ.ಮೇವಿನ ಅಭಾವ..!

ಪ್ರಸ್ತುತ ಗೋಶಾಲೆಗೆ ನೀಡಲಾಗಿರುವ ಜಾಗ ಕಾಡು ಪ್ರದೇಶವಾಗಿರುವದರಿಂದ ಇಲ್ಲಿ ಗೋವುಗಳಿಗೆ ಮೇವಿನ ಅಭಾವ ಎದುರಾಗಿದೆ. ಈ ಪ್ರದೇಶದಲ್ಲಿ ಹುಲ್ಲುಗಾವಲಿಲ್ಲ., ಸನಿಹದಲ್ಲೆಲ್ಲಿಯೂ ಕೂಡ ಗದ್ದೆ ಪ್ರದೇಶಗಳಿಲ್ಲ. ಹಾಗಾಗಿ ಇಲ್ಲಿರುವ ಜಾನುವಾರುಗಳಿಗೆ ಮೇವಿನ ಅಭಾವ ತಲೆದೋರಿದೆ. ಸರಕಾರದ ನಿಯಮಾನುಸಾರ ಪ್ರತಿ ಗೋವಿಗೆ ದಿನಂಪ್ರತಿ ೮ ಕೆಜಿ ಹಸಿ ಹುಲ್ಲು, ೪ ಕೆಜಿ ಒಣ ಹುಲ್ಲು, ಅಗತ್ಯವಿರುವ ಜಾನುವಾರುಗಳಿಗೆ ಹಿಂಡಿ, ತಿನಿಸು ನೀಡಬೇಕಿದೆ. ಆದರೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿ ಹುಲ್ಲು ಲಭ್ಯವಾಗುತ್ತಿಲ್ಲ. ಒಣ ಹುಲ್ಲು ಮಾತ್ರ ದಾಸ್ತಾನಿದೆ. ಗೋಶಾಲೆಯಲ್ಲಿ ದೇಶೀಯ ತಳಿಗಳೇ ಇದ್ದು, ಇದೀಗ ಇತ್ತೀಚೆಗೆ ಕುಶಾಲನಗರ ಬಳಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಎರಡು ಕರುಗಳು ಸೇರಿದಂತೆ ಹತ್ತು ಜರ್ಸಿತಳಿಯ ಬೃಹತ್ ಗಾತ್ರದ ಜಾನುವಾರಗಳನ್ನು ಇಲ್ಲಿಗೆ ಸೇರಿಸಲಾಗಿದ್ದು, ಇವುಗಳ ಪೋಷಣೆ ದುಬಾರಿಯಾಗಿ ಮಾರ್ಪಟ್ಟಿದೆ. ದೇಶೀಯ ತಳಿಗಳನ್ನು ಹಗಲು ವೇಳೆ ಗೋಶಾಲೆಯ ಆವರಣದಲ್ಲಿ ಮೇಯಲು ಬಿಡಲಾಗುತ್ತಿದ್ದು, ಅವುಗಳು ತಮಗೆ ಸಿಕ್ಕ ಹುಲ್ಲು, ಸೊಪ್ಪುಗಳನ್ನು ತಿಂದುAಡು ವಾಪಸ್ ಮರಳುತ್ತವೆ. ಕುಡಿಯುವ ನೀರಿಗಾಗಿ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಆವರಣ ದೊಳಗಡೆಯೇ ಗೊಬ್ಬರದ ಗುಂಡಿಯನ್ನೂ ನಿರ್ಮಿಸಲಾಗಿದೆ.

ಹುಲ್ಲು ಬೆಳೆಯಲು ತಯಾರಿ

ಜಾನುವಾರುಗಳಿಗೆ ಹಸಿರು ಹುಲ್ಲು ಮೇವಿನ ಅಭಾವವಿರುವದರಿಂದ ಪಶುಪಾಲನಾ ಇಲಾಖಾ ವತಿಯಿಂದ ಶಾಲೆಯ ಆವರಣದಲ್ಲಿನ ಪ್ರದೇಶವನ್ನು ಸಮತಟ್ಟು ಮಾಡಿ, ಯಂತ್ರದ ಸಹಾಯದಿಂದ ಉಳುಮೆ ಮಾಡಿ ಹುಲ್ಲು ನಾಟಿ ಮಾಡಲು ತಯಾರಿ ನಡೆಸಲಾಗಿದೆ. ಆರಂಭಿಕವಾಗಿ ಸ್ವಲ್ಪ ಜಾಗದಲ್ಲಿ ಹುಲ್ಲು ನಾಟಿ ಮಾಡಿ ಅದಕ್ಕೆ ತುಂತುರು ಹನಿ ನೀರಾವರಿ ಮೂಲಕ ನೀರು ಹಾಯಿಸಲಾಗಿದ್ದು, ಹುಲ್ಲು ಚಿಗುರಲಾರಂಭಿಸಿದ ಹಿನ್ನೆಲೆಯಲ್ಲಿ ಇದೀಗ ಎಕರೆಯಷ್ಟು ಪ್ರದೇಶದಲ್ಲಿ ಹುಲ್ಲು ನಾಟಿ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ನೀರಾವರಿಗಾಗಿ ಪೈಪ್‌ಲೈನ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ.

ಪಂಚಾಯಿತಿಯಿAದ ರಸ್ತೆ

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಅಬ್ಬಿಫಾಲ್ಸ್ಗೆ ತೆರಳುವ ರಸ್ತೆ ಬದಿಯಲ್ಲಿಯೇ ಈ ಗೋಶಾಲೆಯಿದ್ದು, ಶಾಲೆಗೆ ತೆರಳಲು ಮಣ್ಣಿನ ರಸ್ತೆಯಿತ್ತು. ಇದೀಗ ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ವತಿಯಿಂದ ಸುಸಜ್ಜಿತ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಹೊಸ ರಸ್ತೆಯಿಂದಾಗಿ ಗೋಶಾಲೆ ಎದ್ದು ಕಾಣುವಂತಾಗಿದೆ.

ವ್ಯವಸ್ಥೆ ಮಾಡದ್ದರಿಂದ ತೊಂದರೆ..!

ಸರಕಾರ ಪ್ರತಿ ಜಿಲ್ಲೆಗೊಂದರAತೆ ಗೋಶಾಲೆ ಘೋಷಣೆ ಮಾಡಿ ಅನುದಾನ ಬಿಡುಗಡೆ ಮಾಡಿದ ಕೂಡಲೇ ತರಾತುರಿಯಲ್ಲಿ ಕಟ್ಟಡ ಮಾತ್ರ ನಿರ್ಮಾಣ ಮಾಡಿ ಉದ್ಘಾಟನೆ ಕೂಡ ನೆರವೇರಿಸಲಾಗಿದೆ. ಗೋಶಾಲೆಗೆ ಬೇಕಾದ ಸಮರ್ಪಕ ವ್ಯವಸ್ಥೆಗಳಾದ ಹದ್ದುಬಸ್ತಿಗಾಗಿ ಬೇಲಿ, ಮೇವು ಮುಂತಾದ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡದೇ ಇರುವದರಿಂದ ಇದೀಗ ಸಮಸ್ಯೆ ಎದುರಾಗಿದೆ. ಈ ಬಿರು ಬಿಸಿಲಿನಲ್ಲಿ ಹುಲ್ಲು ನಾಟಿ ಮಾಡಿ ಎಷ್ಟೇ ನೀರು ಹಾಯಿಸಿದರೂ ಹುಲ್ಲು ಬೆಳೆಯುವದು ಅಷ್ಟಕಷ್ಟೇ ಎಂಬದು ಎಲ್ಲರಿಗೂ ತಿಳಿದಿರುವ ಸತ್ಯ. ಈ ಮಳೆಗಾಲ ಕಳೆದ ಬಳಿಕವಷ್ಟೇ ಒಂದಿಷ್ಟು ಚೇತರಿಕೆ ಕಾಣಬಹುದೇನೋ..?

ಗೋಮಾತೆಯನ್ನು ಸಂರಕ್ಷಣೆ ಮಾಡುವ ಮಹತ್ತರ ಕಾರ್ಯದಲ್ಲಿ ತೊಡಗಿರುವ ಈ ಗೋಶಾಲೆ ಪ್ರಾಣಿ ಪ್ರಿಯರ ಸಹಕಾರವನ್ನು ಬಯಸುತ್ತಿದೆ..!

? ಕುಡೆಕಲ್ ಸಂತೋಷ್