ನಾನು ಮಡಿಕೇರಿ ನಗರದ ಹಾಕಿ ಮೈದಾನದ ಎದುರು ಹರಿಯುವ ಪುಟ್ಟ ಕಾಲುವೆ. ನೋಡಿ, ನನ್ನ ಮಡಿಲಿಗೆ ಎಷ್ಟೊಂದು ಕಸದ ಚೀಲಗಳನ್ನು ನಾಗರಿಕರು ಎಸೆದಿದ್ದಾರೆ ! ಮಳೆಗಾಲವೋ, ಬೇಸಿಗೆಯೋ, ಚಳಿಗಾಲವೋ, ಕಾಲ ಯಾವುದಾದರೂ ಆಗಲಿ, ಈ ಮಾನವರು ತ್ಯಾಜ್ಯಗಳನ್ನು ತಂದು ನನ್ನ ಸೆರಗಿನುದ್ದಕ್ಕೂ ಎಸೆದು ಹೋಗುತ್ತಾರೆ.
ಮಳೆಗಾಲದಲ್ಲಿ ನಾನು ತುಂಬಿ ಹರಿಯುವುದರಿಂದ ನಿಮಗೆ ಈ ಚಿತ್ರಣ ಕಾಣ ಸಿಗದು. ನೀರಿನ ಹರಿವು ಕಡಿಮೆಯಾಗಿ ನನ್ನೊಡಲು ಬರಿದಾಗಿ ಹೋಗುತ್ತಿದ್ದರೂ ನನ್ನ ಮೇಲೆ ಇವರಿಗೆ ಕರುಣೆಯಿಲ್ಲ. ಇಷ್ಟೊಂದು ಕಸದ ರಾಶಿಯನ್ನು ಹೇಗೆ ಹೊತ್ತುಕೊಳ್ಳಲಿ, ನೀವೇ ಹೇಳಿ. ಹಸು -ಕರು, ನಾಯಿ ಬೆಕ್ಕು, ಹೀಗೆ ಎಷ್ಟು ಪ್ರಾಣಿಗಳು ನನ್ನ ಆಸುಪಾಸಿನಲ್ಲಿ ಓಡಾಡುತ್ತವೆ. ನಾಗರಿಕ ಪ್ರಜ್ಞೆ ಇದೆ ಎಂದು ಹೇಳಿಕೊಳ್ಳುತ್ತಾ ಇಂತಹ ಅಪರಾಧ ಎಸಗುವ ಅನಾಗರಿಕರಿಗಿಂತ ಪ್ರಾಣಿಗಳೇ ವಾಸಿ. ನೀರು - ಮಣ್ಣುಗಳಲ್ಲಿ ವಿಲೀನಗೊಳ್ಳದ ತ್ಯಾಜ್ಯಗಳನ್ನು ಅವುಗಳು ಉತ್ಪಾದಿಸುವುದೇ ಇಲ್ಲ ಬಿಡಿ. ನನ್ನೆಡೆಗೆ ಎಸೆದ ಗೋಣಿಚೀಲಗಳಲ್ಲಿ ಅದೇನೇನು ತುಂಬಿದ್ದಾರೋ ದೇವರೇ ಬಲ್ಲ. ಕ್ಷೀಣವಾಗಿ ಹರಿಯುವ ನನ್ನ ಮಡಿಲ ಮಕ್ಕಳು ಕೆಲವು ಸತ್ತು ತೇಲುತ್ತಿವೆ.
‘ಕದಡಿದ ಸಲಿಲಂ ತಿಳಿವಂದದೆ’ ಎಂದ ನಾಗಚಂದ್ರನ ಮಾತಿನಂತೆ ಕೊಳೆ, ಕೆಸರು, ಪ್ರಕೃತಿದತ್ತವಾಗಿ ಸೇರಿದ ಕಲ್ಮಶಗಳಿಂದ ನನ್ನ ನೀರು ಕದಡಿ ಹೋದರೆ, ನಾನೇ ತಿಳಿ ಮಾಡಿಕೊಳ್ಳುತ್ತೇನೆ. ಆ ಕಲೆಗಾರಿಕೆ ನನಗಿದೆ. ಆದರೆ ಮನುಷ್ಯರು ಎಸೆವ ಈ ತ್ಯಾಜ್ಯಗಳನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇಲ್ಲೇ... ನನ್ನ ಸೇತುವೆಯ ಮೇಲೆಯೇ ನಿಂತು ಅದ್ಯಾವುದೋ ಪಾನೀಯವನ್ನು ಹೀರಿದ ಮಾನವ ಕಾಗೆಯೊಂದು ಕಸ ಹೆಕ್ಕಿ ತಂದು ಕಸದ ಬುಟ್ಟಿಗೆ ಹಾಕುವ ವೀಡಿಯೋ ನೋಡುತ್ತಾ... ನೋಡುತ್ತಾ.. ಖಾಲಿಯಾದ ಬಾಟಲಿಯನ್ನು ನನ್ನೆದೆಗೆ ಎಸೆದು ಹೋಗುತ್ತಾನೆ. ನಗರ ಸಭೆ ವ್ಯವಸ್ಥೆ ಮಾಡಿರುವ ಕಸ ಒಯ್ಯುವ ವಾಹನಗಳು ಬೊಬ್ಬಿರಿಯುತ್ತಾ ಬೀದಿ ಬೀದಿಗೆ ಬರುತ್ತವೆ. ‘ನಿಮ್ಮ ತ್ಯಾಜ್ಯ ನಿಮ್ಮ ಹೊಣೆ’ ಎಂದು ಹೇಳುತ್ತಲೇ ಸಾಗುತ್ತವೆ. ಆದರೂ ನನಗೆ ಈ ನರಕವಾಸ ತಪ್ಪುವುದೇ ಇಲ್ಲ.
ಬೆಳ್ಳಂಬೆಳಿಗ್ಗೆ ನಾನು ಕಣ್ಣು ಬಿಡುವುದಕ್ಕೂ ಮುನ್ನ ನನ್ನ ಮಡಿಲಿಗೆ ಬಂದು ಬೀಳುವ ಕಸದ ಚೀಲಗಳು ಅದೆಷ್ಟು ಭಾರ! ಅದೆಂಥ ದುರ್ವಾಸನೆ! ಅವರವರ ಮನೆಗಳು ಶುಚಿಯಾಗಿದ್ದರೆ ಸಾಕೇ? ನನ್ನೊಡಲು ಕಲ್ಮಶವಾಗಿಯೇ ಇದ್ದರೆ ಪರವಾಗಿಲ್ಲವೇ? ಇದೆಂಥಾ ಸ್ವಾರ್ಥ... ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲ ಎಂದಾದರೆ ಹೋಗಲಿ ಬಿಡಿ, ತಗ್ಗಿದವನಿಗೆ ಒಂದು ಗುದ್ದು ಜಾಸ್ತಿ ಎನ್ನುತ್ತಾರಲ್ಲ, ಹಾಗೆ ತಗ್ಗಿನಲ್ಲಿರುವ ನಾನು ಈ ಅನ್ಯಾಯವನ್ನು ಸಹಿಸಿಕೊಂಡೇನು. ಆದರೆ ವಿಷಯ ಅದಲ್ಲ, ಕಸದ ಟ್ರಾö್ಯಕ್ಟರ್ಗಳು ಬೀದಿ ಬೀದಿಗೆ ಬರುತ್ತವೆ. ತ್ಯಾಜ್ಯ ಸಂಗ್ರಹಣೆ ಮಾಡಿಕೊಂಡು ಹೋಗುತ್ತವೆ. ಅಂದ ಮೇಲೆ ಕಸವನ್ನು ಹಸಿ, ಒಣ, ಈ ತ್ಯಾಜ್ಯ ಎಂದು ವಿಂಗಡಿಸಿ ಆ ವಾಹನದೊಳಗೇ ಹಾಕಬಾರದೇಕೆ? ೧,೪೧೪,೫೩೩,೧೦೯ ರಷ್ಟು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಮನೆ ಮನೆಗೆ ಪ್ರತ್ಯೇಕವಾಗಿ ತೆರಳಿ ತ್ಯಾಜ್ಯ ಸಂಗ್ರಹಿಸಲು ಯಾವ ಆಡಳಿತ ವರ್ಗಕ್ಕಾದರೂ ಸಾಧ್ಯವೇ? ಮಳೆಗಾಲದಲ್ಲಿ ಸಾಮಾನ್ಯವಾಗಿ ನಾನು ಪ್ರಫುಲ್ಲವಾಗಿಯೇ ಸಾಗುತ್ತೇನೆ. ಒಮ್ಮೊಮ್ಮೆ ಮಳೆ ಜಾಸ್ತಿ ಆದಾಗ ಚಿಕ್ಕ ಪುಟ್ಟ ತೋಡುಗಳ ನೀರನ್ನೆಲ್ಲ ನನ್ನೊಡಲೊಳಗೆ ಸೇರಿಸಿಕೊಂಡು ಹರಿಯಬೇಕಾದಾಗ ನಾನು ಸ್ವಲ್ಪ ಎಲ್ಲೆ ಮೀರಿದ್ದಿದೆ. ಹಾಗೆಂದು ಒಮ್ಮೆ ಮಾಡಿದ ತಪ್ಪಿಗೆ ದಿನ ನಿತ್ಯ ಶಿಕ್ಷೆ ಸರಿಯೇ?
ಕಳೆದ ವರ್ಷ ಅದಾವುದೋ ಸಂಘ ಸಂಸ್ಥೆಯವರು ಎರಡು ಬಾರಿ ಬಂದು ಕಸದ ರಾಶಿಯಾಗಿದ್ದ ನನ್ನೊಡಲನ್ನು ಶುಚಿಗೊಳಿಸಿ ಹೋದರು. ಪುಣ್ಯಾತ್ಮರು ಅವರು! ಮತ್ತೊಮ್ಮೆ ಈ ವರ್ಷ ಬಂದಾರೇ ಅವರು? ಅಥವಾ ನನ್ನ ಸೇತುವೆಯ ಅಂಚಿನಲ್ಲಿ ಇರುವ ಎರಡು ಕಂಬಗಳಿಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಿ ನನ್ನ ಸ್ವಾಸ್ತ್ಯವನ್ನು ಹದಗೆಡಿಸುವ ಜನರನ್ನು ಗುರುತಿಸಿ ನೀರಿನ ಆಕರಗಳನ್ನು ನಿಮ್ಮ ಕಣ್ಣುಗಳಂತೆ ಕಾಪಾಡಿ ಎಂದು ಸಂಬAಧಪಟ್ಟವರು ಬುದ್ಧಿ ಹೇಳಿಯಾರೇ? ಕಾಯುತ್ತಿದ್ದೇನೆ ನಾನು...!
-ಜಯಲಕ್ಷಿö್ಮ ಕೆ., ಉಪನ್ಯಾಸಕರು,
ಸಂತ ಜೋಸೆಫರ ಕಾಲೇಜು, ಮಡಿಕೇರಿ.