ಕುಶಾಲನಗರ, ಜ.೨೩: ರಾಜ್ಯದಲ್ಲಿ ನದಿಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರದ ರಿವರ್ ಬೋರ್ಡ್ ಆಕ್ಟ್ ೧೯೫೬ರ ಕಾಯ್ದೆ ಜಾರಿಗೊಳಿಸಿ ಅನುಷ್ಠಾನ ಮಾಡುವ ಮೂಲಕ ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜೀವನದಿ ಕಾವೇರಿ ಸಂರಕ್ಷಣೆಗೆ ಅನುದಾನ ಮೀಸಲಿರಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಈ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕರಾದ ಎಂ.ಎನ್ ಚಂದ್ರಮೋಹನ್, ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಅವರ ಮೂಲಕ ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದು, ಕಳೆದ ೧೦ ವರ್ಷಗಳಿಂದ ಕಾವೇರಿ ನದಿ ಸಂರಕ್ಷಣೆಗೆ ಆಗ್ರಹಿಸಿ ಮನವಿ ಸಲ್ಲಿಸಿದರೂ ಇದುವರೆಗೆ ಸರ್ಕಾರದಿಂದ ಸ್ಪಂದನ ದೊರಕಿಲ್ಲ. ಈ ಕುರಿತು ಈ ಬಾರಿ ಬಜೆಟ್‌ನಲ್ಲಿ ನದಿಗಳ ಸಂರಕ್ಷಣೆಗಾಗಿ ಕಾನೂನು ಅನುಷ್ಠಾನಗೊಳಿಸುವುದರೊಂದಿಗೆ ಜೀವ ನದಿ ಕಾವೇರಿ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ವಿಶೇಷ ಅನುದಾನ ಕಲ್ಪಿಸುವಂತೆ ಪತ್ರದಲ್ಲಿ ಕೋರಿದ್ದಾರೆ.