ಸುಂಟಿಕೊಪ್ಪ, ಜ. ೨೩: ಪರಿಶಿಷ್ಟ ಜನಾಂಗದವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ ಲಭಿಸಿಲ್ಲ. ದೇವರಕಾಡು ಜಾಗÀ ಒತ್ತುವರಿಯಾಗುತ್ತಿದೆ. ಕಾಡಾನೆಗಳಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಕಸ ವಿಲೇವಾರಿಗೆ ಜಾಗವಿಲ್ಲ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವು ಕೆದಕಲ್ ಗ್ರಾಮ ಪಂಚಾಯಿತಿ ಸಮುದಾಯಭವನದಲ್ಲಿ ಕೆದಕಲ್ ಗ್ರಾ.ಪಂ. ಅಧ್ಯಕ್ಷೆ ವಿಸ್ಮಿತ ಅಧ್ಯಕ್ಷತೆಯಲ್ಲಿ ನಡೆಯಿತು. ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರದ ಪ್ರತಿಯೊಂದು ಯೋಜನೆಗಳು ಜನರ ಮನೆ ಮನೆಗೆ ತಲುಪಬೇಕು ಎಂಬ ಮಹಾತ್ವಾಕಾಂಕ್ಷೆಯಿAದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದ ರಿಂದ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಕೆಲವೊಂದು ಕ್ಲಿಷ್ಟ ಸಮಸ್ಯೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪರಿಹರಿಸಿಕೊಡಲಾಗುವುದು ಎಂದು ಹೇಳಿದರು. ಕೆದಕಲ್ ವಿಭಾಗದಲ್ಲಿ ಬಹಳಷ್ಟು ಪರಿಶಿಷ್ಟ ಸಮುದಾಯದವರು ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದಾರೆ. ಅವರುಗಳಿಗೆ ಇದುವರೆಗೆ ಮತದಾರರ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ ಲಭಿಸಿಲ್ಲ ಎಂದು ಗ್ರಾಮ ಸದಸ್ಯ ಶಿವಶಂಕರ್ ಗಮನ ಸೆಳೆದರು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ತಹಶೀಲ್ದಾರ್ ಪ್ರಕಾಶ್, ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೆದಕಲ್ ಗ್ರಾಮ ಪಂಚಾಯಿತಿಯಲ್ಲಿ ಸರಕಾರದ ಗ್ರಾಮ ಒನ್ ಕೇಂದ್ರ ಇನ್ನೂ ತೆರೆದಿಲ್ಲ. ಆದ್ದರಿಂದ ಗ್ರಾಮಸ್ಥರಿಗೆ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಹೇಳಿದರು.

ವನ್ಯಜೀವಿ ಹಾವಳಿಯಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಬೆಳೆ ಇಳುವರಿ ಕಡಿಮೆಯಾಗಿದೆ. ಕಾಫಿ ಹಣ್ಣು ಮಂಗಗಳು ತಿಂದು ನಾಶಪಡಿಸುತ್ತಿವೆ. ಕಾಡಿನಿಂದ ಬಂದ ಕಾಡಾನೆ, ಕಾಡು ಎಮ್ಮೆ ತೋಟದಲ್ಲಿ ಅಡ್ಡಾಡುವುದ ರಿಂದ ಕಾಫಿ ಗಿಡದ ರಂಬೆಗಳು ನಾಶವಾಗುತ್ತಿವೆ. ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಯಂಕನ ಗೋಫಿನಾಥ್, ಪುಲ್ಲೇರ ಕಾಳÀಪ್ಪ, ಪೆಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕೆದಕಲ್ ಶ್ರೀಭದ್ರಕಾಳೇಶ್ವರಿ ದೇವಾಲಯದ ದೇವರ ಕಾಡು ಒತ್ತುವರಿಯಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಏನು ಕ್ರಮಕೈಗೊಂಡಿದ್ದಾರೆ. ಮರಗಳನ್ನು ಕಡಿಯಲಾಗಿದೆ. ರಸ್ತೆ ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಪಂಚಾಯಿತಿಗೂ ಮಾಹಿತಿ ಯಾವುದೇ ಸಿಗುತ್ತಿಲ್ಲ. ಮೀಸಲು ಅರಣ್ಯ ಪ್ರದೇಶದಲ್ಲಿ ಈ ರೀತಿ ಚಟುವಟಿಕೆ ನಡೆಸುವುದು ಸಾಧ್ಯವೆ ಎಂದು ಪುಲ್ಲೇರ ಕಾಳಪ್ಪ, ತಿಮ್ಮಯ್ಯ ಗೋಪಿನಾಥ್ ಆಕ್ರೋಶ ವ್ಯಕ್ತಪಡಿಸಿದರು. ದೇವರ ಬನದ ಜಾಗದ ಗಡಿ ಗುರುತುಪಡಿಸಿ ದೇವಾಲಯ ಸಮಿತಿಗೆ ಅರಣ್ಯ ಇಲಾಖೆ ವರದಿ ನೀಡಬೇಕೆಂದು ಆಗ್ರಹಿಸಿದರು. ದೇವರ ಜಾಗ ಒತ್ತುವರಿ, ಮರ ಕಡಿತಲೆ, ರಸ್ತೆ ನಿರ್ಮಾಣದ ಬಗ್ಗೆ ಸಂಬAಧಿಸಿದ ಇಲಾಖೆಯಿಂದ ಮಾಹಿತಿ ತರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.

ಸಭೆಯಲ್ಲಿ ಕೆದಕಲ್ ಗ್ರಾ.ಪಂ. ಅಧ್ಯಕ್ಷೆ ಬಿ.ವಿ. ವಿಸ್ಮಿತಾ, ಉಪಾಧ್ಯಕ್ಷ ಪೊನ್ನಪ್ಪ, ಗ್ರಾ.ಪಂ. ಸದಸ್ಯರುಗಳಾದ ಪುಷ್ಪಾ, ಪಾರ್ವತಿ, ಆನಂದ, ಶಿವಕುಮಾರ್, ತಾಲೂಕು ಪಂಚಾಯಿತಿ ಅಧಿಕಾರಿ ರಾಜಶೇಖರ, ಆಹಾರ ಇಲಾಖೆ ನಿರೀಕ್ಷಕಿ ಸ್ವಾತಿ, ಉಪತಹಶೀಲ್ದಾರ್ ಶಿವಪ್ಪ, ಅರಣ್ಯ ಇಲಾಖೆ ಅಧಿಕಾರಿ ದೇವಯ್ಯ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಪಿಡಿಓ ರಾಜಶೇಖರ, ಕಾರ್ಯದರ್ಶಿ ಸುನಿತಾ, ಕಂದಾಯ ಪರಿವೀಕ್ಷಕ ಪ್ರಶಾಂತ್, ಗ್ರಾಮಲೆಕ್ಕಿಗರುಗಳಾದ ನಸೀಮ, ನಾಗೇಂದ್ರ, ಜಯಂತ್ ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.