ಚೆಯ್ಯಂಡಾಣೆ, ಜ. ೨೩: ಕೊಡಗು ಜಿಲ್ಲಾಡಳಿತ, ಮಡಿಕೇರಿ ತಾಲೂಕು ಆಡಳಿತ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಚೆಯ್ಯಂಡಾಣೆ ಯಲ್ಲಿ ನಡೆಯಿತು.ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ವಹಿಸಿದ್ದರು. ಕರಡ ಗ್ರಾಮದ ಮಲ್ಲಮ್ಮ ಒಂದು ವರ್ಷದಿಂದ ಬಿಪಿಎಲ್ ಕಾರ್ಡ್ಗೆ ಅಲೆಯುತ್ತಿದ್ದು, ಬಿಪಿಎಲ್ ಕಾರ್ಡ್ ದೊರೆಯುತ್ತಿಲ್ಲ ಎಂದು ಅಸಮಾಧಾನಪಟ್ಟರು. ಇದಕ್ಕೆ ತಹಶೀಲ್ದಾರ್ ಸಮ್ಮುಖದಲ್ಲಿ ಆಹಾರ ಇಲಾಖೆಯ ಅಧಿಕಾರಿ ಗಿರಿಸುತ ವೇದಿಕೆಯಲ್ಲೆ ಬಿಪಿಎಲ್ ಕಾರ್ಡ್ ನೀಡಿ ಮಲ್ಲಮ್ಮ ಅವರ ಸಮಸ್ಯೆಯನ್ನು ಪರಿಹರಿಸಿದರು.

ಪಹಣಿಯಲ್ಲಿರುವ ಹಾಗೂ ಪಟ್ಟೆದಾರರ ಹೆಸರುಗಳ ಹಾಗೂ ಪಹಣಿ ಸಂಖ್ಯೆಯಲ್ಲಿನ ಗೊಂದಲದ ಬಗ್ಗೆ ತೀವ್ರ ಅಸಮಾಧಾನ ಉಂಟಾ ಗಿದ್ದು ಈ ತೊಂದರೆಯನ್ನು ಇಲ್ಲೇ ಪರಿಹರಿಸಬೇಕೆಂದು ಗ್ರಾಮಸ್ಥರಾದ ಮಚ್ಚಂಡ ಸುಮತಿ ಹಾಗೂ ಜಗದೀಶ್, ಜೆಪ್ಪು ದೇವಯ್ಯ, ಲೋಕೇಶ್, ಕರ್ನಲ್ ಶ್ಯಾನ್ ಬೋಗರ ನಾರಾಯಣ ಮೂರ್ತಿ ಮತ್ತಿತರರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್ ಸ್ಥಳದಲ್ಲೇ ಇದಕ್ಕೆ ಬೇಕಾದ ಪೂರ್ಣ ಮಾಹಿತಿ ಒದಗಿಸಿ ಮೂರು ಸಾವಿರಕ್ಕೂ ಹೆಚ್ಚು ಖಾತೆಗಳ ತೊಂದರೆಯನ್ನು ಸರಿಪಡಿಸಿದ್ದು ಉಳಿದ ತೊಂದರೆ ಯನ್ನು ಆದಷ್ಟು ಬೇಗ ಪರಿಹರಿಸ ಲಾಗುವುದೆಂದರು.

ಆನೆ ಹಾವಳಿಯಿಂದ ತೀವ್ರ ನಷ್ಟ ಉಂಟಾಗುತ್ತಿದ್ದು, ನೀಡುವ ಪರಿಹಾರ ಬಹಳ ಕಡಿಮೆ ಇದೆ. ಒಂದು ಗಿಡಕ್ಕೆ ೭೫ ಪೈಸೆಯ ಲೆಕ್ಕದಲ್ಲಿ ಪರಿಹಾರ ನೀಡಿರುವ ಇದಕ್ಕೆ ಅರಣ್ಯ ಅಧಿಕಾರಿ ಗಳನ್ನು ಜೈನೀರ ರಾಜಕುಮಾರ್ ತರಾಟೆಗೆ ತೆಗದುಕೊಂಡರು. ಇದಕ್ಕೆ ಉತ್ತರಿಸಿದ ಅರಣ್ಯಧಿಕಾರಿ ಆನಂದ್ ಕೂಡಲೇ ಇದಕ್ಕೆ ಪರಿಹಾರ ಒದಗಿಸಲಾಗುವುದು. ಮುಂಚೆ ಒಂದು ಕಾಫಿ ಗಿಡಕ್ಕೆ ೨೦೦ ರೂಪಾಯಿ ಇದ್ದ ಪರಿಹಾರವನ್ನು ಹೆಚ್ಚಿಸಲಾಗಿದೆ ಮುಂದಕ್ಕೆ ಪರಿಹಾರದಲ್ಲಿ ತೊಂದರೆ ಯಾಗದ ರೀತಿಯಲ್ಲಿ ದೊರೆಯಲು ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದೆಂದರು.

ಚೇಲಾವರ ರಸ್ತೆಯ ಅವ್ಯವಸ್ಥೆಯ ಬಗ್ಗೆ ರಾಜ್ ಕುಮಾರ್ ಹಾಗೂ ಲಾಲು ಅಸಮಾಧಾನ ಹೊರಹಾಕಿ ಕೂಡಲೇ ರಸ್ತೆ ದುರಸ್ತಿಪಡಿಸಲು ಅಗ್ರಹಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ದೇವರಾಜ್ ಕೂಡಲೇ ಈ ರಸ್ತೆಯ ಕಾಮಗಾರಿ ನಡೆಯಲಿದೆ ಎಂದರು.

ಅರಪಟ್ಟು ಗ್ರಾಮಸ್ಥ ಹಾಗೂ ಸಾಮಾಜಿಕ ಹೋರಾಟಗಾರ ಪ್ರತೀಕ್ ಪೊನ್ನಣ್ಣ ಮಾತನಾಡಿ ಆರ್‌ಟಿಸಿಯಲ್ಲಿ ಹಲವಾರು ಹೆಸರುಗಳು ಇದ್ದ ಕಾರಣ ಹಾಗೂ ಪಟ್ಟೆದಾರರು ತೀರಿಕೊಂಡು ೧೫/೨೦ ವರ್ಷ ಕಳೆದರು ಕೂಡ ಅವರ ಹೆಸರನ್ನು ಅಳಿಸಲು ಅವರ ಮಕ್ಕಳನ್ನು ಸಂಪರ್ಕಿಸಬೇಕು. ಇದರಿಂದ ಸರಕಾರದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ನಮ್ಮ ಆರ್‌ಟಿಸಿ ತೋರಿಸಿದರೆ ಅದರಲ್ಲಿ ೧೮ ಜನರ ಹೆಸರು ಇದೆ. ಅದರಿಂದ ನಮಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ, ಕಾಡಾನೆ ಹಾವಳಿ ಅಧಿಕವಾಗಿದೆ. ಆದ್ದರಿಂದ ಅರಣ್ಯಾಧಿಕಾರಿಗಳು ನೀಡುತ್ತಿರುವ ಪರಿಹಾರ ಸಾಲದು ಹಾಗೂ ಜಮ್ಮ ಬಾಣೆ ಸರಕಾರಕ್ಕೆ ಸೇರುತ್ತ ಇಲ್ವಾ ಎನ್ನುವ ಮಾಹಿತಿ ಯನ್ನು ನೀಡಬೇಕು ಎಂದು ಒತ್ತಾಯಿಸಿದರು ಇದಕ್ಕೆ ತ ಹಶೀಲ್ದಾರ್ ಮಹೇಶ್ ಹಾಗೂ ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿ ಸೂಕ್ತ ಮಾಹಿತಿ ನೀಡಿದರು.

ಚೆಯ್ಯಂಡಾಣೆ ಅರೋಗ್ಯ ಕೇಂದ್ರದಲ್ಲಿ ಖಾಯಂ ಶುಶ್ರೂಷಣಾಧಿ ಕಾರಿ ಇಲ್ಲದ ಬಗ್ಗೆ ಗ್ರಾಮಸ್ತರು ತಹಶೀಲ್ದಾರ್ ಅವರ ಗಮನಕ್ಕೆ ತಂದರು. ಇದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ ಕನಕಾವತಿ ಮಾಹಿತಿ ನೀಡಿ ಖಾಯಂ ಶುಶ್ರೂಷಣಾಧಿಕಾರಿ ಇಲ್ಲದ ಕಾರಣ ನಾವೇ ಇರುವ ಸಿಬ್ಬಂದಿಗಳೇ ಹೊಂದಾಣಿಕೆ ಮಾಡಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಕೂಡಲೇ ಖಾಯಂ ಶುಶ್ರೂಷಣಾಧಿಕಾರಿ ಒದಗಿಸಲು ಮನವಿ ಸಲ್ಲಿಸಲಾಗಿದೆ ಎಂದರು.

ನಾಪೋಕ್ಲು ಎಡಪಾಲ ಮುಖಾಂತರ ಹಾಗೂ ಭಾಗಮಂಡಲ ಚೆಯ್ಯಂಡಾಣೆ ಮುಖಾಂತರ ಬೆಂಗಳೂರಿಗೆ ತೆರಳುವ ಕರ್ನಾಟಕ ಸಾರಿಗೆ ಇಲಾಖೆಯ ಬಸ್‌ಗಳು ಸರಿಯಾಗಿ ಸಂಚರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗು ತ್ತಿದೆ ಎಂದು ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.

ಹೊಳೆಯಲ್ಲಿ ಮರಳು ಮಾಫಿಯ ನಡೆಯುತ್ತಿದ್ದು ಹೊಳೆಯ ನೀರನ್ನು ತೋಟಗಳಿಗೆ ಸ್ಪಿçಂಕ್ಲರ್ ಮಾಡಿ ಕುಡಿಯಲು ನೀರು ಸಿಗದ ಪರಿಸ್ಥಿತಿ ಒದಗಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕುಪ್ಪೋಡಂಡ ಶಾಫಿ ಒತ್ತಾಯಿಸಿದರು.

ಕರಡ ಸರಕಾರಿ ಶಾಲೆಯ ಜಾಗ ವನ್ನು ಒತ್ತುವರಿ ಮಾಡಿದ್ದು, ಶಾಲೆಗೆ ಸೇರಿದ ೩ ಎಕರೇ ಜಾಗದ ಆರ್‌ಟಿಸಿ ಕೂಡಲೇ ಸರಿಪಡಿಸಿಕೊಡಲು ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಮುಖ್ಯ ಶಿಕ್ಷಕರು ಮನವಿ ಸಲ್ಲಿಸಿದರು. ಚೆಸ್ಕಾಂ ಇಲಾಖೆ ಎಡಪಾಲದಲ್ಲಿ ವಿದ್ಯುತ್ ಕಂಬವನ್ನು ಚರಂಡಿಯಲ್ಲಿ ಸ್ಥಾಪಿಸಿದ್ದು, ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ, ಕೂಡಲೇ ಎಡಪಾಲಕ್ಕೆ ಟ್ರಾನ್ಸ್ ಫಾರಂ ಅಳವಡಿಸಬೇಕು. ಮಳೆಗಾಲದಲ್ಲಿ ಎಡಪಾಲಕ್ಕೆ ವಿದ್ಯುತ್ ಇಲ್ಲ ಎಂದು ಚೆಸ್ಕಾಂ ವಿರುದ್ಧ ಎಡಪಾಲದ ಬಷೀರ್ ಆಕ್ರೋಶ ಹೊರಹಾಕಿದರು. ಕೊಕೇರಿ ಅಂಬಾಡಿ ಪೈಸಾರಿ ನಿವಾಸಿ ಮಾತನಾಡಿ ೪ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಮನವಿ ಮಾಡಿ ದರು. ಇದಕ್ಕೆ ಸೂಕ್ತ ಸ್ಥಳ ದೊರೆತರೆ ಖಂಡಿತ ಮನೆ ಮಂಜೂರು ಮಾಡಿಸಿ ಕೊಡಲಾಗುವುದೆಂದರು.

ಕಾರ್ಯಕ್ರಮದಲ್ಲಿ ಮಡಿಕೇರಿ ತಾಲ್ಲೂಕು ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕರಾದ ಹೇಮಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶೀತ ಲಕ್ಷ್ಮಿ, ಸಹಾಯಕ ಕಾರ್ಯಪಾಲಕ ಅಭ್ಯಂತರ ಎಂ ಜವರೇಗೌಡ, ಸಹಾಯಕ ತೋಟ ಗಾರಿಕಾ ಇಲಾಖೆಯ ಶಿವಕುಮಾರ್, ಕೃಷಿ ಇಲಾಖೆಯ ನಾರಾಯಣ ರೆಡ್ಡಿ, ನಾಪೋಕ್ಲು ಉಪ ತಹಶೀಲ್ದಾರ್ ಸುನಿಲ್ ಕುಮಾರ್, ಲೋಕೋಪಯೋಗಿ ಇಲಾಖೆಯ ದೇವರಾಜ್, ಆಹಾರ ಇಲಾಖೆಯ ಗಿರಿಸುತ, ಅರಣ್ಯ ಇಲಾಖೆಯ ಆನಂದ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪ, ಕಂದಾಯ ಪರಿವಿಕ್ಷಕ ರವಿಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು.