ಕೂಡಿಗೆ, ಜ. ೨೨: ಹೆಬ್ಬಾಲೆಯ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಮನೋಬಲ, ಆತ್ಮಸ್ಥೆöÊರ್ಯ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕ ಜಗದೀಶ್ ಲಕ್ಷಿö್ಮಕಾಂತಯ್ಯ ದೃಶ್ಯ ಮಾಧ್ಯಮಗಳು ಮತ್ತು ವಿವಿಧ ಪ್ರಯೋಗಗಳ ಮೂಲಕ ವಿಜ್ಞಾನದ ಪ್ರಾಯೋಗಿಕತೆ ಹಲವಾರು ಮಹಾನ್ ನಾಯಕರುಗಳು ನಡೆದು ಬಂದ ದಾರಿ ಹಾಗೂ ಸಾಧನೆಯ ಬಗ್ಗೆ ವಿವರಣೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಬನಶಂಕರಿ ಹಿರಿಯ ವಿದ್ಯಾರ್ಥಿಯ ಸಂಘದ ಅಧ್ಯಕ್ಷರಾಗಿರುವ ಹೆಚ್.ಬಿ. ಶಿವಪ್ಪ ೧೦ನೇ ತರಗತಿ ವಿದ್ಯಾರ್ಥಿಗಳು ಅನ್ಯಮಾರ್ಗವನ್ನು ಅನುಸರಿಸದೇ ಪರಿಶ್ರಮದಿಂದ ಪ್ರಾಮಾಣಿಕವಾಗಿ ಓದಿ ಪರೀಕ್ಷೆಯನ್ನು ಬರೆಯಬೇಕು, ಅದು ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿರುತ್ತದೆ. ಕನ್ನಡ ಮಾಧ್ಯಮ ಎಂಬ ಹಿಂಜರಿಕೆಯನ್ನು ಬಿಟ್ಟು ನಿರಂತರವಾಗಿ ಅಭ್ಯಸಿಸಿದರೆ ಯಶಸ್ಸು ಶತಸಿದ್ಧ. ವಿದ್ಯಾರ್ಥಿಗಳು ಸಮಯ ಪಾಲನೆಯನ್ನು ಅನುಸರಿಸಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಎಲ್. ರಮೇಶ್ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಒಂದು ಗುರಿಯನ್ನು ತಲುಪಬೇಕಾದರೆ ಮಾರ್ಗದರ್ಶನಕ್ಕಾಗಿ ಗುರುವಿನ ಅವಶ್ಯಕತೆ ತುಂಬಾ ಮಹತ್ವದ್ದಾಗಿದೆ ಎಂದರು.

ಸಾಹಿತಿ ಕಣಿವೆ ಭಾರದ್ವಾಜ್, ಉಮೇಶ್ ಭಟ್, ನಿವೃತ್ತ ಯೋಧರಾದ ಪುಟ್ಟೇಗೌಡ, ಉದಯ್, ನಾಗೇಂದ್ರ, ಶಾಂಭವ ಮೂರ್ತಿ, ಜವಾಹರ್ ನವೋದಯ ವಿದ್ಯಾಲಯ ಗಾಳಿಬೀಡಿನ ಶಿಕ್ಷಕರಾದ ಅರುಣ್ ಕುಮಾರ್, ಜೀವನ್ ಮುಖ್ಯ ಶಿಕ್ಷಕರಾದ ಬಸವರಾಜ ಶೆಟ್ಟಿ, ಶಿಕ್ಷಕರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಗೀತ ಸ್ವಾಗತಿಸಿ, ನಮಿತಾ ವಂದಿಸಿ, ಗೌತಮಿ ನಿರೂಪಿಸಿದರು.