ಗೋಣಿಕೊಪ್ಪಲು, ಜ. ೨೨: ದ.ಕೊಡಗಿನ ಬಿಟ್ಟಂಗಾಲ ಸಮೀಪ ೨ ನೇ ರುದ್ರಗುಪ್ಪೆ ಬಳಿ ಹುಲಿ ದಾಳಿ ನಡೆಸಿದ್ದು ಗ್ರಾಮದ ಎ.ಧನು ಎಂಬವರಿಗೆ ಸೇರಿದ ಮೂರು ಕರುಗಳು ಬಲಿ ಯಾಗಿದೆ. ಸುದ್ದಿ ತಿಳಿದ ಪೊನ್ನಂಪೇಟೆ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆದರು.

ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮದ ಜನರು ಎಚ್ಚರಿಕೆ ವಹಿಸುವಂತೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ದ.ಕೊಡಗಿನಲ್ಲಿ ಆಗಿಂದಾಗ್ಗೆ ಹುಲಿಗಳ ಸಂಚಾರವಾಗುತ್ತಿದ್ದು, ಸಹಜವಾಗಿಯೇ ಗ್ರಾಮದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತೋಟದಲ್ಲಿ ಕಾಫಿ ಕೊಯ್ಯುವ ಸಮಯವಾಗಿರುವುದರಿಂದ ಕಾರ್ಮಿಕರು ತೋಟಕ್ಕೆ ತೆರಳ ಬೇಕಾಗಿದ್ದು, ಇದೀಗ ಹುಲಿಯೊಂದು ಸಾರ್ವಜನಿಕವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹುಲಿಯ ಚಲನವಲನವನ್ನು ಗಮನಿಸಲು ಐದು ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಕ್ಯಾಮರಾದಲ್ಲಿ ಹುಲಿಯ ಸುಳಿವು ದೊರೆತಲ್ಲಿ ಹುಲಿಯ ಸೆರೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಇಲಾಖೆಯ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.