(ವಿಶೇಷ ವರದಿ: ಹೆಚ್.ಕೆ. ಜಗದೀಶ್)ಗೋಣಿಕೊಪ್ಪಲು, ಜ. ೨೨: ಪೊನ್ನಂಪೇಟೆ ನೂತನ ತಾಲೂಕು ರಚನೆಗೊಂಡು ಎರಡು ವರ್ಷ ಕಳೆದರೂ ಇನ್ನೂ ಕೂಡ ಭೂಮಿ ಕೇಂದ್ರವನ್ನು ಆರಂಭಿಸಲು ಸಾಧ್ಯವಾಗಿಲ್ಲ. ಸುಸಜ್ಜಿತ ಕಟ್ಟಡದೊಂದಿಗೆ ಎಲ್ಲಾ ಸಕಲ ಸವಲತ್ತುಗಳನ್ನು ಹೊಂದಿದ್ದರೂ ಸಹ ಅಗತ್ಯ ದಾಖಲಾತಿ ಒದಗಿಸುವ ಭೂಮಿ ಕೇಂದ್ರವನ್ನು ಆರಂಭಿಸುವಲ್ಲಿ ಇಲಾಖಾಧಿಕಾರಿಗಳ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಅಗತ್ಯ ದಾಖಲೆಗಳಿಗಾಗಿ ಇಂದಿಗೂ ಸಹ ಪೊನ್ನಂಪೇಟೆ ತಾಲೂಕಿನ ಜನರು ವೀರಾಜಪೇಟೆ ತಾಲೂಕು ಕಚೇರಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನೂತನ ತಾಲೂಕು ನಾಮಕಾವಸ್ಥೆಗೆ ಘೋಷಣೆಯಾದಂತಿದೆ.
ಕಳೆದ ಹಲವಾರು ವರ್ಷಗಳಿಂದ ಪೊನ್ನಂಪೇಟೆ ನೂತನ ತಾಲೂಕು ರಚನೆಗೆ ನೂರಾರು ಹಿರಿಯ ನಾಗರಿಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಹೋರಾಟ ಮಾಡಿದ ಫಲವಾಗಿ ಪೊನ್ನಂಪೇಟೆ ತಾಲೂಕು ಕಳೆದೆರೆಡು ವರ್ಷಗಳ ಹಿಂದೆ ಘೋಷಣೆಯಾಗಿತ್ತು. ಇದರಿಂದ ಪ್ರಮುಖವಾಗಿ ದಕ್ಷಿಣ ಕೊಡಗಿನ ಗ್ರಾಮೀಣ ಭಾಗದ ಜನರು, ರೈತರು, ಕೃಷಿಕರು, ವಯೋವೃದ್ಧರು ಸೇರಿದಂತೆ ಹಲವು ಮಂದಿ ದೂರದ ವೀರಾಜಪೇಟೆಯ ತಾಲೂಕು ಕಚೇರಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ ಎಂಬ ಆಶಾಭಾವನೆ ಇತ್ತು. ಆದರೆ, ಇಂದಿಗೂ ವೀರಾಜಪೇಟೆಯನ್ನು ಆಶ್ರಯಿಸಬೇಕಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಜನರಿಗೆ ಬೇಕಾದ ಸೌಕರ್ಯಗಳು ಇನ್ನೂ ಕೂಡ ಕಚೇರಿಯಲ್ಲಿ ಲಭ್ಯವಾಗದಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಸರ್ವೆ ಇಲಾಖೆಯ ನಕ್ಷೆಗಾಗಿ ದೂರದ ವೀರಾಜಪೇಟೆ ಕಚೇರಿಗೆ ಅಲೆದಾಡುವಂತಾಗಿದೆ.
ಪೊನ್ನಂಪೇಟೆ ನೂತನ ತಾಲೂಕಿನಲ್ಲಿ ಈಗಾಗಲೇ ಒಟ್ಟು ನಾಲ್ಕು ತಹಶೀಲ್ದಾರ್ಗಳು ಕೆಲಸ ನಿರ್ವಹಿಸಿದ್ದಾರೆ. ಪ್ರಥಮ ತಹಶೀಲ್ದಾರ್ರಾಗಿ ಎ.ಎ. ಕುಸುಮಾ, ಎರಡನೇ ತಹಶೀಲ್ದಾರರಾಗಿ ಕಾವ್ಯರಾಣಿ, ಮೂರನೇ ತಹಶೀಲ್ದಾರರಾಗಿ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಯೋಗಾನಂದ್ ಪ್ರಬಾರ ಹುದ್ದೆಯಲ್ಲಿ ಮುಂದುವರೆದಿದ್ದರು. ನಂತರ ಪ್ರಶಾಂತ್ರವರು ಖಾಯಂ ತಹಶೀಲ್ದಾರರಾಗಿ ನೇಮಕ ಗೊಂಡಿದ್ದರು. ಪ್ರಸ್ತುತ ಪ್ರಶಾಂತ್ರವರು ಕೆಲಸ ನಿರ್ವಹಿಸುತ್ತಿದ್ದಾರೆ. ಪೊನ್ನಂಪೇಟೆ ತಾಲೂಕಿಗೆ ೪೯ ಗ್ರಾಮಗಳು, ೪ ಹೋಬಳಿ, ೨೧ ಗ್ರಾಮ ಪಂಚಾಯಿತಿಗಳು ಒಳಗೊಂಡಿವೆ.
ಪೊನ್ನAಪೇಟೆ ನೂತನ ತಾಲೂಕು ಕಚೇರಿಗೆ ಸರ್ಕಾರದ ವತಿಯಿಂದ ೨೫ ಲಕ್ಷ ವೆಚ್ಚದಲ್ಲಿ ಅಗತ್ಯ ಪೀಠೋಪಕರಣಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ವಿಸ್ತಾರವಾದ ಕೊಠಡಿಗಳಿದ್ದರೂ ಇಲ್ಲಿಯ ತನಕ ನೂತನ ತಾಲೂಕಿಗೆ ಒಳಪಡುವ ಕಡತಗಳನ್ನು
(ಮೊದಲ ಪುಟದಿಂದ) ವೀರಾಜಪೇಟೆಯ ತಾಲೂಕು ಕಚೇರಿಯಿಂದ ತರುವಲ್ಲಿ ಸಾಧ್ಯವಾಗಿಲ್ಲ. ಇದರಿಂದ ಈ ಭಾಗದ ಜನರ ಪ್ರತಿ ಕಡತಗಳಿಗೂ ವೀರಾಜಪೇಟೆಯ ಕಚೇರಿಯನ್ನು ಅವಲಂಭಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಂದಿಗೂ ಪ್ರತಿ ಕಡತವನ್ನು ವೀರಾಜಪೇಟೆಗೆ ಕಳುಹಿಸುವ ಮೂಲಕ ಈ ಭಾಗದ ಜನರಿಗೆ ಹೊಸ ತಾಲೂಕು ರಚನೆಗೊಂಡರೂ ಯಾವುದೇ ರೀತಿಯ ಪ್ರಯೋಜನಗಳು ಕೈಗೆಟಕುತ್ತಿಲ್ಲ. ನೂತನ ತಾಲೂಕು ರಚನೆಯಿಂದ ನಾಗರಿಕರ ಸಮಸ್ಯಗೆ ಪರಿಹಾರ ಲಭಿಸಲಿದೆ ಎಂಬ ಮಹದಾಸೆ ಮರಿಚೀಕೆಯಾಗಿದೆ.
ಕಂದಾಯ ಇಲಾಖೆಗೆ ಸಂಬAಧಿಸಿದ ಕೆಲಸಗಳು ಈ ಕಚೇರಿಯಲ್ಲಿ ಅಷ್ಟಾಗಿ ನಡೆಯುತ್ತಿಲ್ಲ ಎಂಬ ಮಾತು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದೆ ಭೌಗೋಳಿಕವಾಗಿ ವಿಸ್ತಾರವಾಗಿರುವ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗದಿಂದ ಹಲವಾರು ಸಮಸ್ಯೆಗಳನ್ನು ಹೊತ್ತು ತರುವ ಜನರ ಕಡತಗಳನ್ನು ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೂಡಲೇ ಇತ್ಯರ್ಥಗೊಳಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.