ಸೋಮವಾರಪೇಟೆ, ಜ. ೨೨: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗರಗಂದೂರು ‘ಬಿ’ ಗ್ರಾಮ ಸಮೀಪದ ಹಾರಂಗಿ ಹಿನ್ನೀರು ಪ್ರದೇಶದಲ್ಲಿರುವ ಕಾಫಿ ತೋಟದಲ್ಲಿ ಎರಡು ಗೋವುಗಳ ಕಳೇಬರ ಪತ್ತೆಯಾಗಿದ್ದು, ಗೋ ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಸುಂಟಿಕೊಪ್ಪ ಪೊಲೀಸರು ಕಾಫಿ ತೋಟದ ಮಾಲೀಕನ ವಿರುದ್ದ ಮೊಕದ್ದಮೆ ದಾಖಲಿಸಿದ್ದಾರೆ.
ಗರಗಂದೂರು ಬಿ ಗ್ರಾಮದಲ್ಲಿರುವ ಕರೀಂ ಎಂಬವರ ಪುತ್ರ ಲತೀಫ್ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಎರಡು ದಿನಗಳ ಹಿಂದೆ ೨ ಗೋವುಗಳ ಹತ್ಯೆ ನಡೆಸಿ ಕಳೇಬರವನ್ನು ಮಣ್ಣಿನಡಿ ಹೂತು ಹಾಕಿರುವ ಬಗ್ಗೆ ಮಾಹಿತಿ ಪಡೆದ ಹಿಂದೂ ಜಾಗರಣಾ ವೇದಿಕೆ ಪದಾಧಿಕಾರಿಗಳು, ಪೊಲೀಸರ ಗಮನಕ್ಕೆ ತಂದ ಮೇರೆಗೆ ತೋಟದ ಮಾಲೀಕ ಲತೀಫ್ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಎರಡು ಗೋವುಗಳನ್ನು ಹತ್ಯೆ ಮಾಡಿ ಮಾಂಸ ತೆಗೆದು, ಚರ್ಮ ಹಾಗೂ ಉದರದೊಳಗಿನ ಭಾಗಗಳನ್ನು ಮಣ್ಣಿನಡಿ ಹೂತು ಹಾಕಿದ್ದ ಪ್ರಕರಣ ಇದಾಗಿದೆ. ಗೋಹತ್ಯೆ ನಿಷೇಧವಿರುವ ಕೊಡಗು ಜಿಲ್ಲೆಯಲ್ಲಿ ಪದೇ ಪದೇ ಗೋಹತ್ಯೆ, ಗೋಮಾಂಸ ಮಾರಾಟ, ಗೋವುಗಳ ಅಕ್ರಮ ಕಳ್ಳಸಾಗಾಣಿಕೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಅವುಗಳನ್ನು
(ಮೊದಲ ಪುಟದಿಂದ) ಮಟ್ಟ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದಕ್ಕಾಗಿಯೇ ಗೋಹತ್ಯೆಗಳನ್ನು ದುರುಳರು ನಡೆಸುತ್ತಿದ್ದು, ಈ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಮಿತಿಯ ಪ್ರಮುಖರಾದ ಸುನಿಲ್, ಹಿಂ.ಜಾ.ವೇ. ತಾಲೂಕು ಸಹ ಸಂಚಾಲಕ್ ವಿನು ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ್ ಕುಕ್ಕೇರ ಅಜಿತ್, ಜಿಲ್ಲಾ ಪ್ರಮುಖರಾದ ಸುಭಾಶ್ ತಿಮ್ಮಯ್ಯ, ರಂಜನ್ ಗೌಡ ಒತ್ತಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ. ಸ್ವಾಮಿ ಸೇರಿದಂತೆ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದು, ಲತೀಫ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಹಿAದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಸುನಿಲ್, ವಿನು, ಚಿದು, ಸುನಿಲ್ ,ರಾಜೇಶ್ ಸೇರಿದಂತೆ ಇತರರು ಪೊಲೀಸ್ ಇಲಾಖೆ ಪ್ರಕರಣದ ಸಮಗ್ರ ತನಿಖೆ ನಡೆಸಿ ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.