ನಾಪೋಕ್ಲು, ಜ. ೨೨: ಮೂರ್ನಾಡು ಪಟ್ಟಣದಿಂದ ಪಾರಾಣೆಯತ್ತ ಸಾಗುವಾಗ ಬಲಮುರಿ ಗ್ರಾಮದ ರಸ್ತೆಯುದ್ದಕ್ಕೂ ಪೊರಕೆಗಳ ರಾಶಿ ಕಂಡು ಬರುತ್ತದೆ. ಕಾಫಿ, ಭತ್ತದ ಕೊಯ್ಲು ಸಮಯದಲ್ಲಿ ಪೊರಕೆಗಳಿಗೆ ಬೇಡಿಕೆ ಇದ್ದು ಗ್ರಾಮೀಣಮಂದಿ ಪೊರಕೆ ತಯಾರಿಯಲ್ಲಿ ಆಸಕ್ತಿ ತೋರುತ್ತಾರೆ. ರಸ್ತೆಯ ಬದಿಯಲ್ಲಿ ಪೊರಕೆ ತಯಾರಿಸುತ್ತಾ ಕುಳಿತ ಮಹಿಳೆಯರ ದಿನಚರಿ ಗ್ರಾಹಕರ ನಿರೀಕ್ಷೆಯಲ್ಲಿ ಸಾಗುತ್ತದೆ. ಇದು ಪ್ರತಿ ವರ್ಷದ ಚಿತ್ರಣ. ಕಣ್ವಬಲಮುರಿ ಗ್ರಾಮದ ಆದಿ ಕರ್ನಾಟಕ ಜನಾಂಗದ ೧೮ಕ್ಕೂ ಅಧಿಕ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಪೊರಕೆಗಳನ್ನು ತಯಾರಿಸಿ ಮಾರಾಟ ಮಾಡಿ ಅದರಿಂದ ದೊರಕುವ ಸಂಪಾದನೆಯಿAದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಕಾಡಿನಲ್ಲಿ ಧಾರಾಳವಾಗಿ ದೊರಕುವ ಪೊರಕೆಗೆ ಅಗತ್ಯವಿರುವ ಕಚ್ಚಾ ಸಾಮಗ್ರಿಗಳನ್ನು ತಂದು ಕಣ್ವಬಲಮುರಿಯಲ್ಲಿ ಇವರು ಪೊರಕೆ ತಯಾರಿಸುತ್ತಾರೆ. ಪೊರಕೆ, ಕಸಬರಿಕೆ, ಚೀಪೆ, ಹಿಡುಗಲು ಮೊದಲಾದ ಹೆಸರುಗಳಿಂದ ಬಳಕೆಯಲ್ಲಿರುವ ಪೊರಕೆಗಳಲ್ಲಿ ಇಲ್ಲಿನ ಮಂದಿ ಮೂರು ರೀತಿಯ ಪೊರಕೆಗಳನ್ನು ತಯಾರಿಸುತ್ತಾರೆ. ಮನೆ ಪೊರಕೆ, ತಾಳಿ ಪೊರಕೆ, ಹಾಗೂ ಕಡ್ಡಿ ಪೊರಕೆ. ಇದಕ್ಕೆ ಬೇಕಾದ ಮೂಲ ಸಾಮಗ್ರಿಗಳು ನೆರೆಯ ಕೇರಳ ರಾಜ್ಯದ ಇರಿಟ್ಟಿಯ ಬೆಟ್ಟಗಳಿಂದ ತಂದು ಕಣ್ವ ಬಲಮುರಿಯಲ್ಲಿ ಪೊರಕೆಗಳನ್ನು ತಯಾರಿಸುತ್ತಿದ್ದಾರೆ.

ಸಾಮಾನ್ಯವಾಗಿ ನವೆಂಬರ್ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಪೊರಕೆ ತಯಾರಿಸುವ ಅವಧಿ. ಮೊದಲು ಮನೆಮನೆಗೆ ತೆರಳಿ ಪೊರಕೆ ಮಾರಾಟ ಮಾಡುತ್ತಿದ್ದ ಇವರು ಭತ್ತ ಕೆಲಸ ಪೂರೈಸಿದ ಬಳಿಕ ಭತ್ತವನ್ನು ರೈತರಿಂದ ಪಡೆಯುವ ಸಂಪ್ರದಾಯ ಜಾರಿಯಲ್ಲಿತ್ತು. ಈಗ ಪೊರಕೆ ಮಾರಾಟಕ್ಕೆ ಒತ್ತು ಕೊಡುತ್ತಿದ್ದಾರೆ. ಒಂದು ಪೊರಕೆಗೆ ಐವತ್ತು ರೂಪಾಯಿ ದರ. ಹಿರಿಯರಿಂದ ಬಂದ ಈ ಕಸುಬನ್ನು ಕಾರ್ಮಿಕರು ಕಷ್ಟಪಟ್ಟು ಈಗಲೂ ಮುಂದುವರಿಸುತ್ತಿದ್ದಾರೆ. ಕಡ್ಡಿಪೊರಕೆಗೆ ಬೇಡಿಕೆ ಕಮ್ಮಿ ಆಗುತ್ತಿದೆ. ಎದುರಾಗುತ್ತಿರುವ ಹತ್ತಾರು ಸಮಸ್ಯೆಗಳಿಂದ ಕಸುಬುದಾರರು ಕೆಲವರು ತಮ್ಮ ವೃತ್ತಿಯನ್ನು ತೊರೆದಿದ್ದಾರೆ.

ಕಾಫಿ, ಭತ್ತದ ಕೊಯ್ಲು ಆರಂಭವಾಗುತ್ತಿದ್ದAತೆ ಪೊರಕೆ ತಯಾರಕರು ಬಾಡಿಗೆ ವಾಹನದ ಮೂಲಕ ಬೆಳಿಗ್ಗೆ ತೆರಳಿ ಕಚ್ಚಾ ಸಾಮಗ್ರಿ ಸಂಗ್ರಹಿಸಿ ಸಂಜೆ ಹಿಂತಿರುಗುತ್ತಾರೆ. ಕಾಡಿನಿಂದ ತಂದು ರಸ್ತೆ ಬದಿಯಲ್ಲಿ ಬಿಸಿಲಿಗೆ ಹರಡಿ ಒಣಗಿಸಿ ಹಿಡಿಕಟ್ಟಿ ಮಾರಾಟ ಮಾಡಲು ಶ್ರಮ ಅಧಿಕ. ಹಿಂದಿನಿAದ ನಡೆಸಿಕೊಂಡು ಬಂದ ವೃತ್ತಿಯನ್ನು ಮುಂದುವರಿಸುತ್ತಿದ್ದೇನೆ ಎಂದು ಕಾರ್ಮಿಕ ಮಹಿಳೆ ಸರಸು ಹೇಳಿದರು. ಹಿಂದೆ ಕಚ್ಚಾವಸ್ತು ಧಾರಾಳವಾಗಿ ಲಭಿಸುತಿತ್ತು. ಇತ್ತೀಚೆಗೆ ದೂರ ತೆರಳಬೇಕಾಗಿದೆ. ಕಾಡಿನಿಂದ ಕಚ್ಚಾ ಸಾಮಗ್ರಿಗಳನ್ನು ತರಲು ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ. ಕಚ್ಚಾವಸ್ತು ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹಿಡಿಯ ಚೀಪೆಗಳು ಲಭಿಸುತ್ತಿದ್ದು, ಹೊತ್ತುಕೊಂಡು ಹೋಗಿ ಮಾರಾಟ ಮಾಡುವುದು ಕಷ್ಟಕರ. ತುತ್ತಿನ ಚೀಲ ತುಂಬಿಸಲು ಪೊರಕೆಯ ಮೊರೆ ಹೋಗಿದ್ದೇವೆ ಎಂದು ಕಣ್ವಬಲಮುರಿಯ ಮತ್ತೋರ್ವ ಕಾರ್ಮಿಕ ಸಂಜೀವ ಹೇಳುತ್ತಾರೆ.

-ಸಿ.ಎಸ್.