ಸಿದ್ದಾಪುರ, ಜ. ೨೧: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಪೊಲೀಸ್ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಮೇಲೆತ್ತಲಾಯಿತು.

ಸಿದ್ದಾಪುರ ಸಮೀಪದ ಇಂಜಿಲಗೆರೆ ಪುಲಿಯೇರಿ ಗ್ರಾಮ ನಿವಾಸಿ ಸೀತಾ ಎಂಬವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿಯಾಗಿರುವ ಬಾಬು (೫೦) ತಾ. ೧೫ ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ತೋಟದ ಮಾಲೀಕರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇದೀಗ ೫ ದಿನಗಳ ಬಳಿಕ ತೋಟದ ಮಾಲೀಕರ ಮನೆಯ ಸಮೀಪದ ಬಾವಿಯಲ್ಲಿ ದುರ್ವಾಸನೆ ಬರುತ್ತಿತ್ತು. ನಂತರ ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ಕಾರ್ಮಿಕ ಬಾಬು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವುದು ತಿಳಿದು ಬಂದಿದೆ.

ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯ ಮುಖ್ಯ ಪೇದೆ ಬೆಳ್ಯಪ್ಪ, ಸಿಬ್ಬಂದಿಗಳಾದ ಮಲ್ಲಪ್ಪ ಮುಶಿಗೇರಿ, ಭರತ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಬಾವಿಯಲ್ಲಿದ್ದ ಮೃತದೇಹವನ್ನು ಪೊಲೀಸ್ ಸಿಬ್ಬಂದಿ ಮಲ್ಲಪ್ಪ ಮುಶಿಗೇರಿ ಹಾಗೂ ಸ್ಥಳೀಯ ನಿವಾಸಿ ರಾಜು ಬಾವಿಗೆ ಇಳಿದು ಹೊರತೆಗೆದರು. ನಂತರ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಿದರು. ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.