ಮಡಿಕೇರಿ, ಜ. ೨೧: ಶಿವಯೋಗಿ ಸಿದ್ದರಾಮೇಶ್ವರರು ೧೨ನೇ ಶತಮಾನದಲ್ಲಿ ಶಿವಶರಣರಾಗಿದ್ದರು. ಕನ್ನಡ ಕಾವ್ಯ ಮತ್ತು ಸಮಕಾಲೀನ ವಚನ ಹಾಗೂ ಸಾಹಿತ್ಯ ಕಾರರಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿವಯೋಗಿ ಸಿದ್ದರಾಮೇಶ್ವರರು ಕೆರೆಕಟ್ಟೆ, ಬಾವಿ ಇತರೆ ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಕಾಯಕ ಕಂಡಿದ್ದರು. ಇವರು ೧೨ನೇ ಶತಮಾನದಲ್ಲಿ ವಚನಕಾರರಲ್ಲಿ ಪ್ರಮುಖರಾಗಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಮಾತನಾಡಿ, ಸಮಾಜದಲ್ಲಿ ಸಾಧನೆ ಮಾಡಿದ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೇ, ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡುವ ನಿಟ್ಟಿನಲ್ಲಿ ನಾವು ಉತ್ತಮ ಸಮಾಜ ಕಟ್ಟಬೇಕಾಗಿದೆ ಎಂದು ಹೇಳಿದರು.

ಶಿವಯೋಗಿ ಸಿದ್ದರಾಮೇಶ್ವರು ಬಸವಣ್ಣ, ಅಲ್ಲಮಪ್ರಭುಗಳ ಕಾಲದ ಮಹಾನ್ ಪವಾಡ ಪುರುಷರು. ೧೨ನೇ ಶತಮಾನದಲ್ಲೇ ಕಾಯಕದ ಮೂಲಕ ಅಧ್ಯಾತ್ಮ ಕಂಡುಕೊAಡವರು. ಇವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.

ಫ.ಗು. ಹಳಕಟ್ಟಿ ಅವರು ಸಿದ್ದರಾಮೇಶ್ವರ ವಚನಗಳನ್ನು ಸೇರಿ, ಶರಣರ ವಚನಗಳನ್ನು ಸಂಗ್ರಹಿಸಿದ್ದಾರೆ. ಇವರನ್ನು ಸೊನ್ನಲ್ಲಿಗೆ ಸಿದ್ದರಾಮೇಶ್ವರರು ಎಂತಲೂ ಕೂಡ ಕರೆಯುತ್ತಾರೆ.

೧೨ನೇ ಶತಮಾನದಲ್ಲೇ ಸಾವಿರಾರು ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವರ ವಚನ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಕನ್ನಡದಲ್ಲಿ ಸರ್ವಜ್ಞ ಕವಿ, ತಮಿಳಿನ ತಿರುವಳ್ಳವರ್ ಹಾಗೂ ತೆಲುಗಿನಲ್ಲಿ ವೇಮನ ಅವರು ಪ್ರಸಿದ್ಧರಾಗಿದ್ದಾರೆ. ಇವರಿಂದ ಸಾಮಾನ್ಯ ಆಡುಭಾಷೆಯಲ್ಲಿ ತ್ರಿಪದಿಯ ಪದ್ಯಗಳನ್ನು ರಚಿಸಿ ಸಮಾಜದ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಕುಮಾರ ಮಾತನಾಡಿ, ಸಿದ್ಧರಾಮ ವಚನ, ಸ್ವರವಚನ, ಬಸವಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾದ ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾರೆ. ವಚನ ಮತ್ತು ಸ್ವರವಚನಗಳಲ್ಲಿ ‘ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ ‘ಯೋಗಿನಾಥ' ಅಂಕಿತವಿದೆ. ಸದ್ಯ ಈತನ ೧೧೬೨ ವಚನಗಳು ದೊರೆತಿದ್ದು, ಅವುಗಳಲ್ಲಿ ವೈಯಕ್ತಿಕ ಬದುಕಿನ ಸಂಗತಿಗಳು ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ ಎಂದು ಹೇಳಿದರು.

ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷ ಡಿ. ಸುಜೀತ್ ಮಾತನಾಡಿ, ಭೋವಿ ಸಮಾಜದಲ್ಲಿ ಹಲವು ಉಪಜಾತಿಗಳು ಇದ್ದು, ಅಲೆಮಾರಿಗಳ ರೀತಿ ಬದುಕುತ್ತಿದ್ದು, ಶಾಲಾ ದಾಖಲಾತಿ ಸರಿಪಡಿಸುವಂತಾಗಬೇಕು ಎಂದರು.

ಸೋಮವಾರಪೇಟೆ, ಬಾಣವಾರ, ಕೊಡ್ಲಿಪೇಟೆ, ಸುಂಟಿಕೊಪ್ಪ ಮತ್ತಿತರ ಕಡೆಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಬೇಕು. ಸಮಾಜದಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದು, ಸ್ವಂತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅವಕಾಶ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.