ಮೂರ್ನಾಡು, ಜ. ೨೧: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ಪೋಷಕ ಶಿಕ್ಷಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಬಾಚಟ್ಟಿರ ಮಾದಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಪುದಿಯೋಕ್ಕಡ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಖಜಾಂಚಿಗಳಾದ ಬಡುವಂಡ ಸುಬ್ರಮಣಿ ಪಾಲ್ಗೊಂಡಿದ್ದರು.
ಅಧ್ಯಕ್ಷರು ಮಾತನಾಡಿ, ಮೂರ್ನಾಡು ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಸದಾ ಕಾರ್ಯೋನ್ಮುಖವಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಕಾಲೇಜಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಮಕ್ಕಳ ಪ್ರಗತಿಯನ್ನು ತಿಳಿದುಕೊಳ್ಳಬೇಕೆಂದು ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಾತನಾಡಿ, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಂದೆ ತಾಯಿಗಳ ಪಾತ್ರ ಬಹಳ ಮುಖ್ಯ, ಮಕ್ಕಳ ಪ್ರತಿಯೊಂದು ನಡವಳಿಕೆಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಿರಬೇಕೆಂದು ಹೇಳಿದರು.
ಸಭೆಯಲ್ಲಿ ಪ್ರಾಂಶುಪಾಲೆ ಡಾ. ರೇಖಾ ಚಿಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಸದಾ ಚೈತನ್ಯಶೀಲರಾಗಿರುವಂತೆ ನೋಡಿಕೊಳ್ಳಬೇಕು. ಅವರ ಆಸಕ್ತಿಯನ್ನು ಗೌರವಿಸಬೇಕು. ಪ್ರತಿ ತಂದೆ-ತಾಯಿಯರು ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಿದರು.
ಪೋಷಕ - ಶಿಕ್ಷಕ ಸಮಿತಿಯ ಸಭೆಯ ಮಹತ್ವವನ್ನು ಉಪನ್ಯಾಸಕಿ ಕಲ್ಪನಾ ತಿಳಿಸಿಕೊಟ್ಟರು. ಉಪನ್ಯಾಸಕ ನವೀನ್ ಸ್ವಾಗತಿಸಿದರೆ, ಉಪನ್ಯಾಸಕಿ ವಿಲ್ಮಾ ವಂದಿಸಿದರು, ಹರೀಶ್ ಕಿಗ್ಗಾಲು ಕಾರ್ಯಕ್ರಮ ನಿರೂಪಿಸಿದರು.