ಮಡಿಕೇರಿ, ಜ. ೨೦: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೊಡಗು ಜಿಲ್ಲಾ ಸಮಿತಿಯ ಶತಮಾನೋತ್ಸವ ಸಂಭ್ರಮ ಮಡಿಕೇರಿಯ ಮೈತ್ರಿ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಸಿ. ರಮೇಶ್ ಅವರು ಇಲಾಖೆಯನ್ನು ಖಾಸಗೀಕರಣಗೊಳಿಸಿದಲ್ಲಿ ಗುತ್ತಿಗೆದಾರರು ತೊಂದರೆಗೆ ಒಳಗಾಗಬಹುದು ಎಂಬ ಆತಂಕದಲ್ಲಿ ಇರಬಾರದು; ಅಂತಹ ಸಂದರ್ಭ ಬಂದಲ್ಲಿ ಯಾವುದೇ ಹೋರಾಟಕ್ಕೂ ಸಂಘ ಸಿದ್ಧವಿದೆ ಎಂದು ಭರವಸೆ ನೀಡಿದರು. ವಿದ್ಯುತ್ ಮಂಡಳಿಯಲ್ಲಿ ಸಂಸ್ಥೆಯ ಒಬ್ಬ ಪ್ರತಿನಿಧಿಯನ್ನು ನಿರ್ದೇಶಕನನ್ನಾಗಿ ಆಯ್ಕೆ ಮಾಡುವಂತೆ ಸರಕಾರವನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಮಡಿಕೇರಿಯಲ್ಲಿ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ೧೫ ಲಕ್ಷ ರೂಪಾಯಿ ನೀಡುವುದಾಗಿಯೂ ಅವಶ್ಯವಿದ್ದಲ್ಲಿ ಇನ್ನೂ ಹೆಚ್ಚಿನ ನೆರವು ನೀಡುವುದಾಗಿಯೂ ಘೋಷಿಸಿದರು.
ಕೊಡಗು ಮತ್ತು ಚಾಮರಾಜನಗರ ವಿಭಾಗದ ಅಧೀಕ್ಷಕ ಅಭಿಯಂತರ ಎಲ್. ಸೋಮರಾಜು ಅವರು ಮಾತನಾಡಿ (ಮೊದಲ ಪುಟದಿಂದ) ಈ ಹಿಂದೆ ಮತ್ತು ಇಂದಿನ ವ್ಯವಸ್ಥೆಯಲ್ಲಿ ಇಲಾಖೆ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ನೆನಪಿಸಿದರು. ಹಿಂದೆ ಇಲಾಖೆಯ ನೌಕರರೇ ವಿದ್ಯುತ್ ಲೈನ್‌ಗಳನ್ನು ಅಳವಡಿಸುತ್ತಿದ್ದು ಇದೀಗ ಖಾಸಗಿ ಗುತ್ತಿಗೆದಾರರಿಗೂ ಈ ಜವಾಬ್ದಾರಿಯನ್ನು ನೀಡುವ ನಿಟ್ಟಿನಲ್ಲಿ ಇಲಾಖೆ ಸಾಕಷ್ಟು ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ತಂದಿದೆ ಎಂದು ಉದಾಹರಿಸಿದರು. ಜಿಲ್ಲಾ ಉಪ ವಿದ್ಯುತ್ ಪರಿವೀಕ್ಷಕ ಅಮಿತ್ ಕಶ್ಯಪ್ ಅವರು ಮಾತನಾಡಿ ಸಂಘದ ಸದಸ್ಯರು ೧೦೦ ವರ್ಷಗಳ ಸಿಂಹಾವಲೋಕನವನ್ನು ಮಾಡಿಕೊಳ್ಳುವ ಅಗತ್ಯತೆ ಇದೆ ಎಂದರು. ಸೇವೆಯೊಂದಿಗೆ ಜ್ಞಾನವನ್ನು ವೃದ್ಧಿಸಿಕೊಂಡಲ್ಲಿ ಸೇವೆಯ ಪರಿಣಾಮ ಉನ್ನತ ಮಟ್ಟದಾಗಿರುತ್ತದೆ ಎಂದು ಕೂಡ ಕಶ್ಯಪ್ ವಿಶ್ಲೇಷಿಸಿದರು.
ಶಕ್ತಿ ದಿನ ಪತ್ರಿಕೆಯ ಸಂಪಾದಕ ಚಿದ್ವಿಲಾಸ್ ಅವರು ಮಾತನಾಡಿ ವಿದ್ಯುತ್ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಸ್ನೇಹಿಯಾಗಿ ರೂಪುಗೊಂಡಿದ್ದು ಕೊಡಗಿನಂತ ಮಲೆನಾಡು ಪ್ರದೇಶಗಳಲ್ಲಿ ನೌಕರರು ವಾರಿಯರ್ ರೂಪದಲ್ಲಿ ಕೆಲಸ ಮಾಡುತ್ತಾರೆ ಎಂದು ಶ್ಲಾಘಿಸಿದರು. ವಿದ್ಯುತ್ ಗುತ್ತಿಗೆದಾರರು ಗ್ರಾಹಕರು ಮತ್ತು ವಿದ್ಯುತ್ ಇಲಾಖೆಯ ನಡುವಿನ ಕೊಂಡಿ ಆಗಿ ಕೆಲಸ ನಿರ್ವಹಿಸುತ್ತಿದ್ದು ಸಂಘದ ವತಿಯಿಂದ ಗ್ರಾಹಕರಿಗೆ ಉತ್ತಮ ಸೇವೆ ಲಭಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಒಂದು ದಶಕದ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಅತ್ಯಂತ ಪ್ರಾಮಾಣಿಕವಾದ ರೀತಿಯಲ್ಲಿ ವಿದ್ಯುತ್ ಇಲಾಖೆ ಕಾರ್ಯನಿರ್ವಹಿಸಿದ್ದು ಈ ಹಿಂದೆಗೆ ಹೋಲಿಸಿದರೆ ಗ್ರಾಹಕರಿಗೆ ಉತ್ತಮ ವಿದ್ಯುತ್ ಸಂಪರ್ಕ ಲಭ್ಯವಾಗುತ್ತಿದೆ ಎಂದು ಇಲಾಖೆಯ ಕಾರ್ಯ ವೈಖರಿ ಕುರಿತು ಹರ್ಷ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯದರ್ಶಿ ಚಂದ್ರಬಾಬು ಅವರು ಮಾತನಾಡಿ ಈ ಹಿಂದೆ ಕೊಡಗಿನಲ್ಲಿ ಉಂಟಾಗಿದ್ದ ಮಳೆ ಹನಿಯ ಸಂದರ್ಭ ತೋರ ಗ್ರಾಮದಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ತಮ್ಮ ಸಂಘ ಸುಮಾರು ೧.೫ ಲಕ್ಷದಲ್ಲಿ ನೆರವನ್ನು ನೀಡಿರುವುದನ್ನು ನೆನಪಿಸಿಕೊಂಡರು. ಕೇಂದ್ರ ಸಮಿತಿಯ ಗೌರವ ಉಪಾಧ್ಯಕ್ಷ ಎಂ.ಎನ್. ಉಮೇಶ್ ಅವರು ಕೊಡಗಿನಲ್ಲಿ ಸಂಘದ ಸ್ವಂತ ಕಟ್ಟಡಕ್ಕೆ ವೈಯಕ್ತಿಕವಾಗಿ ೫ ಲಕ್ಷ ರೂಪಾಯಿ ಧನಸಹಾಯ ನೀಡುವುದಾಗಿ ಘೋಷಿಸಿದರು. ಕೊಡಗು ವಿಭಾಗದ ಚೆÀಸ್ಕಾಂ ಕಾರ್ಯಪಾಲಕ ಅಭಿಯಂತರೆ ಅನಿತಾಭಾಯಿ ಅವರು ಮಾತನಾಡಿ ಇತರ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಕೊಡಗು ವಿಭಿನ್ನತೆಯಿಂದ ಕೂಡಿದ್ದು ಗುತ್ತಿಗೆದಾರರು ಹಾಗೂ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಬಣ್ಣಿಸಿದರು.
ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ. ಪೂಣಚ್ಚ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ನಡೆದು ಬಂದ ಹಿನ್ನೆಲೆಯ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಕೆ.ಆರ್. ರಮೇಶ್ ಅಧೀಕ್ಷಕ ಅಭಿಯಂತರ ಎನ್. ಸೋಮರಾಜು, ವಿದ್ಯುತ್ ಗುತ್ತಿಗೆದಾರರಾಗಿ ಸೇವೆ ಸಲ್ಲಿಸಿದ ಮಡಿಕೇರಿಯ ನಿರಂಜನ್, ಕುಶಾಲನಗರದ ಶ್ರೀನಿವಾಸ ಪೊನ್ನಂಪೇಟೆಯ ಸುಬ್ರಮಣಿ ವೀರಾಜಪೇಟೆಯ ರಫೀಕ್ ಹಾಗೂ ಸೋಮವಾರಪೇಟೆಯ ಸುಬ್ರಮಣ್ಯ ಇವರುಗಳನ್ನು ಸನ್ಮಾನಿಸಲಾಯಿತು. ಕುಮಾರಿ ಇಂಚರಳಿAದ ಪ್ರಾರ್ಥನೆ, ಜಿಲ್ಲಾ ಕಾರ್ಯದರ್ಶಿ ರವಿಚಂದ್ರ ಅವರಿಂದ ಸ್ವಾಗತ, ಗಣೇಶ್ ಅವರಿಂದ ವಂದನಾರ್ಪಣೆ ನಡೆಯಿತು. ಜಿಲ್ಲಾ ಖಜಾಂಚಿ ಮಹಮ್ಮದ್ ಶರೀಫ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸೋಮವಾರಪೇಟೆಯ ಲಹರಿ ಮೆಲೋಡಿಸ್ ಅವರಿಂದ ರಸ ಸಂಜೆ ಕಾರ್ಯಕ್ರಮ ನಡೆಸಲಾಯಿತು.
ವೇದಿಕೆಯಲ್ಲಿ ಬೆಂಗಳೂರಿನ ಕೇಂದ್ರ ಸಮಿತಿ ಸದಸ್ಯ ಬಿ.ಎಂ. ಗಣೇಶ್ ಉಪಾಧ್ಯಕ್ಷರುಗಳಾದ ಮಂಜುನಾಥ್, ಎನ್.ಜಿ. ಸುರೇಶ್, ಜಂಟಿ ಕಾರ್ಯದರ್ಶಿ ಸುಬ್ರಮಣಿ, ಸಂಘಟನಾ ಕಾರ್ಯದರ್ಶಿ ವಸಂತ್ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರವಿ ಅಪ್ಪು ಕುಟ್ಟನ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಭರತ್, ಕುಶಾಲನಗರ ತಾಲೂಕು ಅಧ್ಯಕ್ಷ ಬಸವರಾಜ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಮಹೇಶ್ ಉಪಸ್ಥಿತರಿದ್ದರು