ಕುಶಾಲನಗರ, ಜ. ೨೦ : ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗೆ ಸೇರಿದ ಸರ್ಕಾರಿ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ ಶಶಿಧರ್ ಗಂಭೀರ ಆರೋಪ ಮಾಡಿದ್ದಾರೆ.

ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಆವರಣದ ಸರ್ವೇ ನಂ.೪೩/೩ ರ ಸರ್ಕಾರಿ ಜಾಗವನ್ನು ಕಳೆದ ೩ ದಶಕಗಳ ಹಿಂದೆ ಕ್ಷೇತ್ರ ಶಾಸಕರು ಮತ್ತು ಅಂದಿನ ಜಿಲ್ಲಾ ಪಂಚಾಯಿತಿ ಸದಸ್ಯರಾದಿಯಾಗಿ ಹೋರಾಟ ನಡೆಸುವ ಮೂಲಕ ಬೇಲಿ ನಿರ್ಮಿಸಿ ಸಂರಕ್ಷಣೆ ಮಾಡಲಾಗಿತ್ತು. ಇದೀಗ ಪ್ರೌಢಶಾಲೆಗೆ ಸೇರಿದ ಜಾಗವನ್ನು ಏಕಾಏಕಿ ಒತ್ತುವರಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳದಲ್ಲಿದ್ದ ಮರ- ಗಿಡಗಳನ್ನು ಕಡಿದು, ನಿಯಮಬಾಹಿರವಾಗಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಶಾಸಕರು ಭೇಟಿ ನೀಡಿ, ಸರ್ಕಾರಿ ಜಾಗವನ್ನು ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶಾಲೆಗೆ ಅಗತ್ಯವಿರುವ ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ವ್ಯಕ್ತಿಯೊಬ್ಬರು ಏಕಾಏಕಿ ಕಾಮಗಾರಿ ಆರಂಭಿಸಿದ್ದು, ಶಾಲಾ ಅಭಿವೃದ್ಧಿ ಸಮಿತಿ ತಕ್ಷಣ ಗಮನ ಹರಿಸಿ ಈ ಜಾಗವನ್ನು ಸಂರಕ್ಷಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಸದಸ್ಯ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಸ್.ಆದಂ, ಸರ್ಕಾರಿ ಸ್ವತ್ತು ಖಾಸಗಿ ವ್ಯಕ್ತಿಗಳ ಪಾಲಾಗದಂತೆ ವಿದ್ಯಾರ್ಥಿಗಳನ್ನು ಸೇರಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭ ಪುರಸಭೆ ಸದಸ್ಯರಾದ ದಿನೇಶ್, ಪ್ರಮೋದ್ ಮುತ್ತಪ್ಪ, ಕುಡ ಮಾಜಿ ಅಧ್ಯಕ್ಷರಾದ ಮಂಜುನಾಥ ಗುಂಡುರಾವ್, ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರರು ಇದ್ದರು. ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.