ಗೋಣಿಕೊಪ್ಪಲು, ಜ. ೧೯ : ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ನಿರಂತರವಾಗಿದೆ. ಸರ್ಕಾರ ಈ ಬಗ್ಗೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡು ಕಾಡಾನೆಗಳು ನಾಡಿಗೆ ಬರದಂತೆ ಅರಣ್ಯದ ಅಂಚಿನಲ್ಲಿ ಕೋಟ್ಯಂತರ ಹಣವನ್ನು ವಿನಿಯೋಗಿಸಿ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸುತ್ತಿದ್ದರೂ ಅರಣ್ಯದಲ್ಲಿರುವ ಬುದ್ಧಿವಂತ ಕಾಡಾನೆಗಳು ಉಪಾಯದಿಂದ ದಾಟಿ ನಗರ ಪ್ರದೇಶಕ್ಕೆ ದೌಡಾಯಿಸುತ್ತಿವೆ.

ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ ಒಳಪಡುವ ಅನೇಕ ಭಾಗದಲ್ಲಿ ಕಾಡಾನೆ ದಾಳಿ ತಡೆಗೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಕಂದಕ ನಿರ್ಮಾಣವಾಗಿದೆ. ಆದರೂ, ಒಂಟಿ ಸಲಗವೊಂದು ರೈಲ್ವೆ ಬ್ಯಾರಿಕೇಡನ್ನು ದಾಟಿ ನಾಡಿನತ್ತ ತೆರಳುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂಟಿ ಸಲಗವು ಅರಣ್ಯ ಪ್ರದೇಶದಿಂದ ಹೊರಟು ಬ್ಯಾರಿಕೇಡ್ ಬಳಿ ಬಂದು ರಾಜಾರೋಷವಾಗಿ ಆನೆಯ ಬುದ್ಧಿವಂತಿಕೆಯನ್ನು ಅನಾವರಣ ಮಾಡಿದೆ.

ಪ್ರತಿ ವರ್ಷ ಕೊಡಗಿನಲ್ಲಿ ಅಂದಾಜು ೧೨ ರಿಂದ ೧೫ಕ್ಕಿಂತಲೂ ಹೆಚ್ಚು ಮಾನವ ಪ್ರಾಣ ಹಾನಿ ಸಂಘರ್ಷ ಆಗುತ್ತಿದ್ದು ಬಹುತೇಕ ಕಾರ್ಮಿಕ ವರ್ಗದ ಜನರು ಇಂತಹ ಸಂಘರ್ಷದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಆನೆ ಮಾನವ ಸಂಘರ್ಷ ಕೊನೆಗಾಣಿಸಲು ಕೊಡಗಿನಲ್ಲಿ ಇಲ್ಲಿಯ ತನಕ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಕಾಡಾನೆಗಳ ಹಾವಳಿಗಳನ್ನು ತಪ್ಪಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ಕರ್ನಾಟಕದ ತೂಗಾಡುವ ಸೋಲಾರ್ ತಂತಿಗಳು, ಬಂಗಾಳದ ಉತ್ತರ ಭಾಗದ ಮೆಣಸಿನಪುಡಿ ಹೊಗೆಯ ಪ್ರಯೋಗ ಅಸ್ಸಾಂನಲ್ಲಿ ಪ್ರಚಲಿತವಿರುವ ಜೇನು ನೊಣಗಳ ಗುಯ್ ಗುಡುವಿಕೆ, ಹಲವಾರು ಪ್ರಯತ್ನಗಳನ್ನು ನಡೆಸಿದರಾದರೂ ಕಾಡಾನೆಗಳ ಉಪಟಳ ತಡೆಯಲು ಸಾಧ್ಯವಾಗುತ್ತಿಲ್ಲ. ಕೊಡಗಿನಲ್ಲಿ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಇಪಿಟಿ ತಂತ್ರಯೋಜನೆ ಫಲ ನೀಡಿಲ್ಲ. ಕರ್ನಾಟಕದ ಕೆಲ ಭಾಗದಲ್ಲಿ ಜರ್ಮನ್ ತಂತ್ರಜ್ಞಾನವಿರುವ ರೇಡಿಯೋ ಕಾಲರ್ ಅಳವಡಿಸಿ ಆನೆಗಳ ಚಲನವಲನಗಳ ಬಗ್ಗೆ ನಿಗಾವಹಿಸಲಾಗಿದೆ. -ಹೆಚ್.ಕೆ. ಜಗದೀಶ್