ಗೋಣಿಕೊಪ್ಪಲು, ಜ. ೧೯: ಸ್ವಾತಂತ್ರö್ಯ ಬಂದು ೭೫ ವರ್ಷ ಕಳೆದರೂ ದಲಿತರು ಒಂದು ಸೂರಿಗಾಗಿ ಇನ್ನೂ ಕೂಡ ಪರಿತಪಿಸುವ ಕಾಲ ದೂರವಾಗಿಲ್ಲ. ಉಳ್ಳವರಿಗೆ ಭೂಮಿಗಳನ್ನು ನೀಡುತ್ತ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ತಾ. ೨೬ರ ಗಣರಾಜ್ಯೋತ್ಸವದಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿಯ ಮುಂದೆ ನಿವೇಶನ ರಹಿತ ದಲಿತರು ಅಪಾರ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆಂದು ಹಿರಿಯ ದಲಿತ ಮುಖಂಡ ಬೆಳ್ಳೂರು ಕೃಷ್ಣಪ್ಪ ತಿಳಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಹಾಗೂ ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಡಗಿನ ನಿವೇಶನ ರಹಿತರು ಗುಡಿಸಲುಗಳನ್ನು ಕಟ್ಟಿಕೊಂಡು ಸೂರಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಇವರಿಗೆ ಇಲ್ಲಿಯ ತನಕ ಸೂರನ್ನು ನೀಡುವ ಕುರಿತು ಜಿಲ್ಲಾಡಳಿತ ಕ್ರಮಗಳನ್ನು ಕೈಗೊಂಡಿಲ್ಲ. ಅಧಿಕಾರಿಗಳಿಗೆ ಬಡಜನತೆಯ ಕಷ್ಟ ಅರ್ಥವಾಗುತ್ತಿಲ್ಲ. ಅಲ್ಲದೆ ಹಲವು ಅಧಿಕಾರಿಗಳಿಗೆ ಇಚ್ಚಾ ಶಕ್ತಿಯ ಕೊರತೆ ಇರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಬಾರಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದ ವೇಳೆ ಕೇವಲ ಹಾರಿಕೆ ಉತ್ತರಗಳನ್ನು ನೀಡಿ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತಾ. ೨೬ ಸಂವಿಧಾನ ಸಮರ್ಪಣ ದಿನದಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಟ್ಟಣದಿಂದ ಮೆರವಣಿಗೆ ಸಾಗಿ ನಂತರ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಹುದಿಕೇರಿ ಹೋಬಳಿಯ ಹೈಸೊಡ್ಲೂರು ಗ್ರಾಮದಲ್ಲಿ ಕಳೆದ ೫ ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಕೊಡಗಿನ ಮೂಲ ನಿವಾಸಿಗಳಿಗೆ ಇನ್ನೂ ಕೂಡ ನ್ಯಾಯ ದೊರಕಿಲ್ಲ. ತಹಶೀಲ್ದಾರ್ ಮಾಸಿಕ ಪರಿಶಿಷ್ಟರ ದೌರ್ಜನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದರು. ವಾಸವಿರುವ ಜನರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು. ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡಿದ್ದ ಆದಿವಾಸಿಗಳನ್ನು ಕೊಡಗು ಜಿಲ್ಲಾಡಳಿತ ಒಕ್ಕಲೆಬ್ಬಿಸಿದೆ. ಈ ವೇಳೆ ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿಗಳು ಲಿಖಿತ ಪತ್ರ ನೀಡಿ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರೂ ಇಲ್ಲಿಯ ತನಕ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದ ಇವರು, ಸರ್ಕಾರಿ ಜಾಗವನ್ನು ಭೂ ಮಾಲೀಕರಿಗೆ ಭೋಗ್ಯಕ್ಕೆ ನೀಡುವುದನ್ನು ಖಂಡಿಸುವುದಾಗಿ ಕೃಷ್ಣಪ್ಪ ಬೆಳ್ಳೂರು ತಿಳಿಸಿದರು. ಗೋಷ್ಠಿಯಲ್ಲಿ ದಲಿತ ಮುಖಂಡರಾದ ಪಿ.ಬಿ. ಕರ್ಕು, ಗಣೇಶ್, ನಿತೇಶ್, ಹೆಚ್.ಕೆ. ಗಿರೀಶ್, ಜವರ, ಚಂದ್ರು ಉಪಸ್ಥಿತರಿದ್ದರು.