ಸುಂಟಿಕೊಪ್ಪ, ೧೯: ಕೊಡಗರಹಳ್ಳಿ ನೇತಾಜಿ ಯುವಕ ಸಂಘದ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು ಅಧ್ಯಕ್ಷರಾಗಿ ಮಂಡುವAಡ ಪುನೀತ್ ಪೂಣಚ್ಚ ಆಯ್ಕೆಯಾಗಿದ್ದಾರೆ.

ಸಂಘದ ನೇತಾಜಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುನಿಲ್ ಹಾಗೂ ಖಜಾಂಚಿಯಾಗಿ ಮಿಥುನ್ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಡಾ.ಶಶಿಕಾಂತರೈ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕಾರ್ಯದರ್ಶಿ ಸಿ.ಸಿ. ನಾರಾಯಣಸ್ವಾಮಿ ವರದಿ ವಾಚಿಸಿದರು. ಖಜಾಂಚಿ ಸಿ.ಎನ್. ದತ್ತ ಸೋಮಣ್ಣ ಲೆಕ್ಕಪತ್ರ ಮಂಡಿಸಿದರು.

ನಿರ್ಗಮಿತ ಅಧ್ಯಕ್ಷ ಡಾ.ಶಶಿಕಾಂತರೈ ಮಾತನಾಡಿ, ಸಂಘವು ಜಿಲ್ಲೆಯಲ್ಲಿ ಹೆಸರು ಪಡೆದ ಸಂಘ ವಾಗಿದ್ದು ಫುಟ್ಬಾಲ್ ಕ್ರೀಡೆಯಲ್ಲಿ ಜಿಲ್ಲಾ ಚಾಂಪಿಯನ್ ಪಟ್ಟವನ್ನು ಪಡೆದಿದೆ. ಕ್ರೀಡೆ ಮಾತ್ರವಲ್ಲದೆ ಜನೋಪಯೋಗಿ ಹಾಗೂ ಸಮಾಜಮುಖಿ ಕಾರ್ಯಕ್ರಮ ಗಳಾಗಿ ಆರೋಗ್ಯ ಶಿಬಿರ, ಪಶು ವೈದ್ಯಕೀಯ ಶಿಬಿರ, ಅಂತರ ಶಾಲಾ ಹಾಕಿ ಪಂದ್ಯಾವಳಿಗಳನ್ನು ನಡೆಸಿ ಕೊಂಡು ಬರುತ್ತಿವೆ. ೧೯೫೯ ರಷ್ಟು ಹಿಂದೆಯೇ ಈ ಸಂಘ ಸ್ಥಾಪನೆ ಯಾಗಿದ್ದು, ಸಂಘದ ಹಿರಿಯ ಸದಸ್ಯ ಡಾ.ಎಂ.ಪಿ. ಗಣೇಶ್ ಅವರು ಪದ್ಮಶ್ರೀ ಪುರಸ್ಕೃತರಾಗಿರುವುದು ಹೆಮ್ಮೆಯ ವಿಚಾರ. ಹಾಗೆಯೇ ಸಂಘದ ಸದಸ್ಯರುಗಳು ರಾಜಕೀಯ, ಸಮಾಜ ಸೇವೆ, ಸರಕಾರಿ ಉದ್ಯೋಗ, ಧಾರ್ಮಿಕ ಮತ್ತು ಶಿಕ್ಷಣ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಕೂಡ ರಾಜ್ಯ ಮತ್ತು ರಾಷ್ಟçಮಟ್ಟದ ಸಾಧನೆ ಮಾಡಿರುವುದನ್ನು ಅವರು ಸ್ಮರಿಸಿದರು.

ನೂತನ ಆಡಳಿತ ಮಂಡಳಿಗೆ ಎಲ್ಲರೂ ಸಹಕಾರ ಮತ್ತು ಮಾರ್ಗ ದರ್ಶನ ನೀಡುವ ಮೂಲಕ ಯುವಕ ಸಂಘದ ಕೀರ್ತಿ ಪತಾಕೆಯನ್ನು ಮುಗಿಲೆತ್ತರ ಕೊಂಡೊಯ್ಯುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು. ನೂತನ ಅಧ್ಯಕ್ಷ ಪೂಣಚ್ಚ ಮಾತನಾಡಿ ತಮ್ಮ ಅಧಿಕಾರವಧಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ವರ ಸಹಕಾರವನ್ನು ಕೋರಿದರು. ಇದೇ ಸಂದರ್ಭದಲ್ಲಿ ಸಲಹಾ ಸಮಿತಿಯನ್ನು ರಚಿಸಿ ಅಧ್ಯಕ್ಷರಾಗಿ ಕೆ.ಎಸ್.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಪೂರ್ಣ ಪ್ರಮಾಣದ ಸಮಿತಿಯನ್ನು ನೂತನ ಅಧ್ಯಕ್ಷರು ಮತ್ತು ಸಲಹಾ ಸಮಿತಿಯೊಂದಿಗೆ ಅಸ್ತಿತ್ವಕ್ಕೆ ತರಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾಜಿ ಅಧ್ಯಕ್ಷ ಬಿ.ಸಿ.ದಿನೇಶ್ ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿ ಸುನಿಲ್ ವಂದಿಸಿದರು.