ಮಡಿಕೇರಿ, ಜ. ೧೮: ಕಸ ಎಲ್ಲೆಂದರಲ್ಲಿ ಎಸೆಯಬೇಡಿ ಎಂಬ ಬೆಳಗ್ಗಿನ ಕಸದ ಟ್ರ‍್ಯಾಕ್ಟರ್‌ನ ಹಾಡು ಅರಣ್ಯ ರೋಧನವಾಗಿದೆ. ಕಸ ಎಸೆಯುವವರಿಗೆ ಕಠಿಣ ಶಿಕ್ಷೆ ಎಂಬ ಮಡಿಕೇರಿ ನಗರಸಭೆಯ ಟ್ರ‍್ಯಾಕ್ಟರ್‌ನ ಹಾಡು ಬೆಳಿಗ್ಗೆ ತಡವಾಗಿ ಏಳುವವರಿಗೆ ಕೇವಲ ಕಿರಿಕಿರಿಯ ಹಾಡಾಗಿದೆ ಹೊರತು ಪ್ರಾಯೋಗಿಕವಾಗಿ ಶಿಕ್ಷೆ ನೀಡುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ.

ನಗರದ ಕಾಲೇಜು ರಸ್ತೆಯ ಕಾವೇರಿ ಹಾಲ್ ಬಳಿ ಇರುವ ಸಾಲು ಸಾಲು ಅಂಗಡಿಗಳಿಗೆ ಕಸ ವಿಲೇವಾರಿಯ ಟ್ರ‍್ಯಾಕ್ಟರ್ ಕಾಣದಾಗಿದ್ದು, ಕಾವೇರಿ ಹಾಲ್‌ನಲ್ಲಿ ರಸ್ತೆಗೆ ಹೊಂದಿಕೊAಡಿರುವ ವಾಹನ ನಿಲುಗಡೆ ಸ್ಥಳದಲ್ಲಿನ ಸಣ್ಣ ಬರೆ, ಕಸ ವಿಲೇವಾರಿ ಘಟಕವಾಗಿ ಪರಿವರ್ತನೆಗೊಂಡಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮಕ್ಕೆ ನಗರಸಭೆಯು ಈ ಹಿಂದೆ ನಗರದ ವಿವಿಧೆಡೆಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸಿ ಆ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ನಗರಸಭೆಯ ಪರಿಸರ ಅಧಿಕಾರಿ ಮೂಲಕ ದಂಡ ವಿಧಿಸಲಾಗುತ್ತಿತ್ತು. ಇದೀಗ ಈ ಕಠಿಣ ಕ್ರಮವು ಪಾಲನೆಯಾಗದೆ ಇರುವುದು ನಗರದ ವಿವಿಧೆಡೆ ಕಸದ ಕೊಂಪೆಗಳು ಹೆಚ್ಚಾಗಲು ಕಾರಣವಾಗಿದೆ.