ಸೋಮವಾರಪೇಟೆ, ಜ. ೧೮: ತಾಲೂಕಿನ ಗರ್ವಾಲೆ ಗ್ರಾಮದ ಕೋಟೆ ಬೆಟ್ಟದ ತಟದಲ್ಲಿ ಹುಲಿ ದಾಳಿ ನಿರಂತರವಾಗಿದ್ದು, ನಿನ್ನೆಯಷ್ಟೇ ಮೇಯಲು ಬಿಟ್ಟಿದ್ದ ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ.
ಗ್ರಾಮದ ಪುದಿಯತಂಡ ಮೊಣ್ಣಯ್ಯ ಅವರಿಗೆ ಸೇರಿದ ಮೂರು ವರ್ಷದ ಹಸುವನ್ನು ಮೇಯಲು ಬಿಡಲಾಗಿತ್ತು. ಸಂಜೆಯಾದರೂ ಹಸು ವಾಪಸ್ ಆಗಿರಲಿಲ್ಲ. ಇಂದು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಹುಲಿ ಸೆರೆಗೆ ಬೋನು ಇಡಲಾಗಿದ್ದ ಸ್ಥಳದಲ್ಲಿಯೇ ಜಾನುವಾರಿನ ಕಳೇಬರ ಪತ್ತೆಯಾಗಿದೆ.
ಈವರೆಗೆ ಪುದಿಯತಂಡ ಮೊಣ್ಣಯ್ಯ ಅವರಿಗೆ ಸೇರಿದ ೧೧ ದನಕರುಗಳು, ೬ ಆಡುಗಳು ಹಾಗೂ ೨ ನಾಯಿಗಳು ಹುಲಿ ದಾಳಿಗೆ ಬಲಿಯಾದಂತಾಗಿದೆ. ಈ ಭಾಗದಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿದೆ. ಅರಣ್ಯ ಇಲಾಖೆಯು ಕಳೆದ ವರ್ಷ ಹುಲಿ ಸೆರೆಗೆ ಬೋನು ಇಟ್ಟಿದೆ. ಆದರೆ ಈ ಬೋನಿನೊಳಗೆ ಸಿಲುಕದ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹುಲಿ ಸಂಚಾರದಿAದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿದೆ. ಜಾನುವಾರುಗಳನ್ನು ಮೇಯಲು ಬಿಡಲೂ ಹಿಂದೇಟು ಹಾಕುವಂತಾಗಿದೆ. ತೋಟ ಗದ್ದೆಗಳಿಗೆ ತೆರಳಲೂ ಭಯಪಡುವಂತಾಗಿದೆ. ತಕ್ಷಣ ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಿ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು. ಜಾನುವಾರಿನ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.