ಮಡಿಕೇರಿ, ಜ. ೧೯: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಕ್ರೀಡಾಕೂಟಗಳು ಸ್ಫೂರ್ತಿ ತುಂಬುತ್ತದೆ ಎಂದು ಕೊಡವ ಟಗ್ ಆಫ್ ವಾರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅಭಿಪ್ರಾಯಪಟ್ಟರು.
ಕೊಡಗು ಪ್ರೆಸ್ಕ್ಲಬ್ ಬೆಳ್ಳಿ ಮಹೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ತಾ. ೨೨ ರಂದು ಮಡಿಕೇರಿಯಲ್ಲಿ ಆಯೋಜಿಸಿರುವ ಕೊಡಗು ಪ್ರೆಸ್ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-೩ರ ಟ್ರೋಫಿ ಅನಾವರಣ ಕಾರ್ಯಕ್ರಮ ಪೊನ್ನಂಪೇಟೆ ತಾಲೂಕು ಬೇಗೂರುವಿನ ಖಾಸಗಿ ರೆಸಾರ್ಟ್ನಲ್ಲಿ ನಡೆಯಿತು.
ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ನಡೆಯುತ್ತಿದೆ ಎನ್ನುವುದಕ್ಕೆ ವಿಶಿಷ್ಟ ರೀತಿಯಲ್ಲಿ ಟ್ರೋಫಿ ಅನಾವರಣ ಮಾಡಿರುವುದೇ ಸಾಕ್ಷಿ ಎಂದು ಕಿರಣ್ ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪಾಲಿಬೆಟ್ಟ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಜನರಲ್ ಸರ್ಜನ್ ಡಾ. ಪಿ.ಎಸ್. ಲೋಹಿತ್ ಮಾತನಾಡಿ, ಕೌಟುಂಬಿಕ ಚೌಕಟ್ಟಿನೊಳಗೆ ಬದುಕುವುದರ ಜೊತೆಗೆ ಸಮಾಜಕ್ಕೆ ತುಡಿಯುವ ಪತ್ರಕರ್ತರ ಸೇವೆ ಅಭಿನಂದನಾರ್ಹ ಎಂದÀÄ ಶ್ಲಾಘಿಸಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್ ಸವಿತಾ ರೈ ಮಾತನಾಡಿ, ಕೊಡಗು ಪ್ರೆಸ್ಕ್ಲಬ್ ವಿನೂತನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯ ಕ್ರಿಕೆಟ್ ಪಂದ್ಯಾವಳಿ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಈ ಹಿಂದಿನ ೨ ವರ್ಷ ಯಶಸ್ವಿಯಾಗಿ ನಡೆದಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಭಾಗವಹಿಸುತ್ತಿದ್ದು ಈ ವರ್ಷವೂ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯಮಿ ಕೋಳೆರ ಗೌರವ್ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಮುಳಿಯ ಜ್ಯುವೆಲ್ಸ್ ಮಡಿಕೇರಿ ಶಾಖಾ ವ್ಯವಸ್ಥಾಪಕ ತೀತಮಾಡ ಸೋಮಣ್ಣ ಟ್ರೋಫಿ ಅನಾವರಣಗೊಳಿಸಿದರು. ಗೋಣಿಕೊಪ್ಪದ ಖ್ಯಾತ ವಕೀಲ ಪ್ರದೀಪ್ಕುಮಾರ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ವಿ.ವಿ. ಅರುಣ್ಕುಮಾರ್ ವೇದಿಕೆಯಲ್ಲಿ ಇದ್ದರು.
ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ಕುಮಾರ್ ಗುಹ್ಯ ಕಾರ್ಯಕ್ರಮ ನಿರೂಪಿಸಿದರು. ಚನ್ನನಾಯಕ್ ಪ್ರಾರ್ಥಿಸಿ, ನಿರ್ದೇಶಕ ಸುನಿಲ್ ಪೊನ್ನೇಟಿ ಸ್ವಾಗತಿಸಿ, ಎಂ.ಎನ್. ಚಂದ್ರಮೋಹನ್ ವಂದಿಸಿದರು.