ಮಡಿಕೇರಿ, ಜ. ೧೭: ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲರೂ ಕಟಿಬದ್ಧರಾಗಿರೋಣ ಎಂದು ಕಾಂಗ್ರೆಸ್ ಕಾರ್ಯ ಕರ್ತರಿಗೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ಕರೆ ನೀಡಿದರು.

ಮರಗೋಡುವಿನಲ್ಲಿರುವ ವಿವೇಕಾನಂದ ಸಭಾಂಗಣದಲ್ಲಿ ನಡೆದ ಮರಗೋಡು ಮತ್ತು ಹೊಸ್ಕೇರಿ ಜಂಟಿ ವಲಯಗಳ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಸಮರ್ಥರಾಗಿರುವ ಏಳು ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು ಹೈಕಮಾಂಡ್ ಟಿಕೆಟ್ ಯಾರಿಗೆ ನೀಡಿದರೂ ಎಲ್ಲರೂ ಒಟ್ಟಾಗಿ ಸೇರಿ ಅವರನ್ನು ಗೆಲ್ಲಿಸುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಕೊಡಗಿನಲ್ಲಿ ಬಿಜೆಪಿ ವಿರೋಧಿ ಅಲೆ ತೀವ್ರವಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಬೂತ್‌ಗಳಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಶಾಸಕರ ವೈಫಲ್ಯಗಳನ್ನು ಮನವರಿಕೆ ಮಾಡುವಂತೆ ಸಲಹೆ ನೀಡಿದರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಬಿ.ಎ. ಜೀವಿಜಯ, ಡಾ. ಮಂಥರ್ ಗೌಡ, ಹರಪಳ್ಳಿ ರವೀಂದ್ರರವರು ಮಾತನಾಡಿ, ಎಲ್ಲಾ ಆಕಾಂಕ್ಷಿಗಳು ಒಗ್ಗಟ್ಟಾಗಿ ಇರುವ ಭರವಸೆ ನೀಡಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮರಗೋಡು ವಲಯ ಕಾಂಗ್ರೆಸ್ ಅಧ್ಯಕ್ಷ ಪಾಂಡನ ವಿವೇಕಾನಂದ, ಹೊಸ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟಿ ಸದಾ ಡೆನ್ನಿಸ್, ಕೆಪಿಸಿಸಿ ಮುಖಂಡರಾದ ಟಿ.ಪಿ. ರಮೇಶ್, ಡಿಸಿಸಿ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ, ಪಾಪು ಸಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಗಳಾದ ಕೊಲ್ಯದ ಗಿರೀಶ್, ಮುನೀರ್ ಅಹಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೋವಿಂದ ರಾಜ್ ದಾಸ್, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಜಯೇಂದ್ರ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಸಂಘಟನಾ ಕಾರ್ಯದರ್ಶಿ ರವಿಗೌಡ, ಡಿಸಿಸಿ ಕಾರ್ಯದರ್ಶಿ ಮಂದ್ರಿರ ಮೋಹನ್ ದಾಸ್, ಲಿಲ್ಲಿ ಗೌಡ, ಮೈಸಿ, ತಬ್ರಜ್, ಡಿಸಿಸಿ ಸದಸ್ಯ ಖಾಲೀದ್ ಹಾಕತ್ತೂರು ಸೇರಿದಂತೆ ಮರಗೋಡು ಹಾಗೂ ಹೊಸ್ಕೇರಿ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮಡಿಕೇರಿ ಬ್ಲಾಕ್ ಅಧ್ಯಕ್ಷ ಚೆರಿಯಮನೆ ಭಾರ್ಗವ ಸ್ವಾಗತಿಸಿ, ಮಡಿಕೇರಿ ಬ್ಲಾಕ್ ಖಜಾಂಚಿ ಬಲ್ಲಚಂಡ ಚಂದನ್ ವಂದಿಸಿದರು.