ಮಡಿಕೇರಿ, ಜ. ೧೭: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳು ಹಾಗೂ ದುರಾಡಳಿತದ ಬಗ್ಗೆ ಮನೆ, ಮನೆಗೆ ತೆರಳಿ ಕಾಂಗ್ರೆಸ್ ಕಾರ್ಯ ಕರ್ತರು ತಿಳಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಕರೆ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಬ್ಲಾಕ್ ಪಂಚಾಯತ್ ರಾಜ್ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಜನಪ್ರತಿನಿಧಿಗಳು ಯಾವುದೇ ಜನಪರ ಕೆಲಸ ಮಾಡಲಿಲ್ಲ.
ಭ್ರಷ್ಟ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಬೆಳೆಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ತೊಡಕು ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ತಡೆಗೋಡೆ ಕಾಮಗಾರಿಯಲ್ಲಿ ಬಹುಕೋಟಿ ಅಕ್ರಮ ನಡೆದಿರುವುದು ಬಹಿರಂಗಗೊAಡಿದೆ. ಇದನ್ನು ಬೆಳಕಿಗೆ ತಂದ ಕಾಂಗ್ರೆಸ್ ಮುಖಂಡರ ಮೇಲೆ ಭ್ರಷ್ಟ ಅಧಿಕಾರಿಗಳು ದೌರ್ಜನ್ಯ ನಡೆಸುವ, ಸುಳ್ಳು ಕೇಸ್ ದಾಖಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಜಿಲ್ಲೆಯ ದುರಂತವಾಗಿದೆ. ಇಂತಹ ಸಾವಿರ ಪ್ರಸಂಗ ಬಂದರೂ ಹೋರಾಟ ಗಾರರಿಗೆ ಉಚಿತ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದರು.
ಯುವ ಮುಖಂಡ ಡಾ. ಮಂಥರ್ ಗೌಡ ಮಾತನಾಡಿ, ಅಧಿಕಾರದ ವಿಕೇಂದ್ರೀಕರಣ ಮೂಲಕ ರಾಜೀವ್ ಗಾಂಧಿಯವರು ಪಂಚಾಯತ್ ವ್ಯವಸ್ಥೆಗೆ ಬಲ ತುಂಬಿದ್ದರು. ಇದರಿಂದ ಭ್ರಷ್ಟಾಚಾರ ಕ್ಷೀಣವಾಗಿತ್ತು.
ಆದರೆ ಈಗ ರಾಜ್ಯದ ಬಿಜೆಪಿ ಸರ್ಕಾರ ಪಂಚಾಯತ್ ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಪರವಾನಿಗೆ ನೀಡಿದೆ ಎಂದು ಆರೋಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಪಂಚಾಯತ್ ರಾಜ್ ಸಂಘಟನೆಯ ಸಂಘಟಕರು ಆದ್ಯತೆ ನೀಡಬೇಕು. ಪ್ರತಿ ಬೂತ್ಗಳಲ್ಲಿ ಸಂಘಟನೆಯ ಕಾರ್ಯಚಟುವಟಿಕೆ ಗಳನ್ನು ಆರಂಭಿಸುವAತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಹಾಲಿ ಸದಸ್ಯರು, ಮಾಜಿ ಸದಸ್ಯರು ಮತ್ತು ಪರಾಜಿತ ಅಭ್ಯರ್ಥಿಗಳನ್ನು ಸಕ್ರಿಯಗೊಳಿಸಿ ಜಿಲ್ಲೆಯ ೫೪೨ ಬೂತ್ಗಳಿಗೆ ತಲಾ ಮೂವರಂತೆ ಬೂತ್ ಸಂಘಟಕರನ್ನು ಪೂರ್ಣ ಪ್ರಮಾಣದ ಕಾರ್ಯಕರ್ತ ರಾಗಿ ಬಳಕೆ ಮಾಡಲಾಗುತ್ತದೆ. ಬಿಜೆಪಿ ಶಾಸಕರು ಸ್ಥಳೀಯವಾಗಿ ಮಾಡಿರುವ ವೈಫಲ್ಯಗಳನ್ನು ಪ್ರತಿಯೊಬ್ಬ ಜಿಲ್ಲೆಯ ಮತದಾರರಿಗೆ ಮನವರಿಕೆ ಮಾಡಲಾಗುವುದು ಎಂದು ವಿವರಿಸಿದರು.
ಪಂಚಾಯತ್ ರಾಜ್ ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷರಾಗಿ ಎಸ್.ಎಸ್. ಶಿವಾನಂದನವರು ಹಾಗೂ ಇತರ ಮೂವತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ವೇದಿಕೆಯಲ್ಲಿ ನಡೆಯಿತು.
ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಸತೀಶ್, ಕುಶಾಲನಗರ ಬ್ಲಾಕ್ ಅಧ್ಯಕ್ಷ ವಿ.ಪಿ. ಶಶಿಧರ್ ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ಯಾಕುಬ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಜಯೇಂದ್ರ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೋವಿಂದರಾಜ್ ದಾಸ್, ಹಿರಿಯ ಮುಖಂಡರಾದ ಎಸ್.ಕೆ. ವೀರಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶುಕ್ಲಾಂಬರ ಸ್ವಾಗತಿಸಿ, ಅಧ್ಯಕ್ಷ ಶಿವಾನಂದ ವಂದಿಸಿದರು. ಗೋವಿಂದ ರಾಜ್ ದಾಸ್ ಕಾರ್ಯಕ್ರಮ ನಿರೂಪಿಸಿದರು.