ಮಡಿಕೇರಿ, ಜ. ೧೮: ವೈಲ್ಡ್ ಮಾಸ್ಟರ್ಸ್ ಕೊಡಗು ಆಯೋಜಿತ ಜಿಲ್ಲೆಯ ಮೊದಲ ೧೦ ಓವರ್‌ಗಳ ಮಾದರಿಯ ಟಿ -೧೦ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ದೊರಕಿತು. ‘ಶಕ್ತಿ' ಸಲಹಾ ಸಂಪಾದಕ ಬಿ.ಜಿ ಅನಂತಶಯನ, ಉದ್ಯಮಿ ರಾಕೇಶ್ ಅನ್ವೇಕರ್ ಹಾಗೂ ನಗರಸಭಾ ನಿವೃತ್ತ ಅಧಿಕಾರಿ ರಾಮಚಂದ್ರ ಅವರುಗಳು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ನಂತರ ಚೆಂಡನ್ನು ಕ್ರಿಕೆಟ್ ಬ್ಯಾಟ್ ಮೂಲಕ ಭಾರಿಸಿ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ವೈಲ್ಡ್ ಮಾಸ್ಟರ್ಸ್ನ ರವಿಕಿರಣ್, ರಿಷಿತ್ ಮಾದಯ್ಯ ಹಾಗೂ ಇತರರು ಇದ್ದರು.

ಪಂದ್ಯಾಟವು ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಬರ್ಲಿ ಟಿ ೧೦ ತಂಡವು ನಿಗದಿತ ೧೦ ಓವರ್‌ಗಳಲ್ಲಿ ೮ ವಿಕೆಟ್‌ಗಳ ನಷ್ಟಕ್ಕೆ ೫೭ ರನ್‌ಗಳನ್ನು ಭಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕರವಲೆ ಭಗವತಿ ತಂಡವು ೮.೫ ಓವರ್‌ಗಳಲ್ಲಿ ೪ ವಿಕೆಟ್‌ಗಳ ನಷ್ಟಕ್ಕೆ ಗುರಿ ಸಾಧಿಸಿ ಜಯಗಳಿಸಿತು.

೨ನೇ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಟಿ ೧೦ ತಂಡವು ೧೦ ಓವರ್‌ಗಳಲ್ಲಿ ೨ ವಿಕೆಟ್‌ಗಳ ನಷ್ಟಕ್ಕೆ ೮೪ ರನ್ ಗಳಿಸಿ ಎದುರಾಳಿ ಶ್ರೀ ಕೋಟೆ ಮಹಾಗಣಪತಿ

(ಮೊದಲ ಪುಟದಿಂದ) ತಂಡಕ್ಕೆ ೮೫ ರನ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಶ್ರೀ ಕೋಟೆ ಮಹಾಗಣಪತಿ ತಂಡವು ೧೦ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೭೬ ರನ್ ಗಳಿಸಿ ಸೋಲು ಅನುಭವಿಸಿತು.

೩ನೇ ಪಂದ್ಯದಲ್ಲಿ ಕರವಲೆ ಭಗವತಿ ತಂಡವು ೧೦ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ಬೃಹತ್ ೧೦೪ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಧಾರ್ಮಿಕ್ ಟಿ ೧೦ ತಂಡವು ೧೦ ಓವೆರ್ ಗಳಲ್ಲಿ ೪ ವಿಕೆಟ್‌ಗಳ ನಷ್ಟಕ್ಕೆ ೮೯ ರನ್ ಗಳಿಸಿ ಪರಾಭಾವಗೊಂಡಿತು.

ತಾ. ೨೨ ರವರೆಗೆ ಪಂದ್ಯಾವಳಿ ನಡೆಯಲಿದ್ದು, ಪ್ರತಿನಿತ್ಯ ೩ ಪಂದ್ಯಾಟಗಳು ನಡೆಯಲಿವೆ.