ಕುಶಾಲನಗರ, ಜ. ೧೮: ಕುಶಾಲನಗರ ಪಟ್ಟಣದ ಗುಂಡುರಾವ್ ಬಡಾವಣೆಯಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ.

ಪುರಸಭೆ ವ್ಯಾಪ್ತಿಯ ೧ನೇ ಬ್ಲಾಕ್ ಗುಂಡುರಾವ್ ಬಡಾವಣೆಯ ಐಡಿಎಸ್‌ಎಂಟಿ ಜಾಗದ ಸರ್ವೆ ನಂ. ೧೭ ರ ೬.೧೯ ಎಕರೆ ಜಾಗದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಿಸಲು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೋರಿದ ಹಿನ್ನೆಲೆಯಲ್ಲಿ ೨೦೨೨ ರ ಅಗಸ್ಟ್ ತಿಂಗಳಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.

ಐಡಿಎಸ್‌ಎಂಟಿ ಯೋಜನೆಯ ನಿಧಿಯನ್ನು ಪಂಚಾಯಿತಿಯ ಇತರ ಯೋಜನೆಗಳಿಗೆ ಬಳಸಿಕೊಳ್ಳುವ ಬಗ್ಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಚರ್ಚೆ ನಡೆದಿತ್ತು. ಇದೀಗ ಪುರಸಭೆ ವತಿಯಿಂದ ಜಾಗವನ್ನು ಸಮತಟ್ಟು ಮಾಡುವ ಕೆಲಸ ಭರದಿಂದ ಸಾಗಿದೆ. ಹೊರಾಂಗಣ ಕ್ರೀಡಾಂಗಣ ನಿರ್ಮಿಸಲು ಅನುದಾನ ಮಂಜೂರು ಮಾಡಲು ಸಂಬAಧಿಸಿದ ಇಲಾಖಾ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಜಯವರ್ಧನ್ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕ್ರೀಡಾಂಗಣಕ್ಕೆ ಅವಶ್ಯವಿರುವ ಮೂಲಭೂತ ವ್ಯವಸ್ಥೆಗಳಾದ ಶೌಚಾಲಯ, ಬೆಳಕಿನ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಜೊತೆಗೆ ಈಜುಕೊಳ ನಿರ್ಮಾಣ ಯೋಜನೆ ಇರುವುದಾಗಿ ಅವರು ತಿಳಿಸಿದರು. ಹೊರಾಂಗಣ ಕ್ರೀಡಾಂಗಣ ಬಳಸುವ ಸಂಘ ಸಂಸ್ಥೆ ಗಳಿಗೆ ನಿಗದಿತ ಶುಲ್ಕ ವಿಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಗುಂಡುರಾವ್ ಬಡಾವಣೆಯಲ್ಲಿ ಕ್ರೀಡಾಂಗಣದ ಸಮೀಪ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಸರ್ವೆ ನಂ. ೧೬.೨ ರಲ್ಲಿ ೨.೮೮ ಎಕರೆ ವಿಸ್ತೀರ್ಣವನ್ನು ಮಂಜೂರು ಮಾಡಲಾಗಿದೆ.

ಕುಶಾಲನಗರ ಪಟ್ಟಣ ತಾಲೂಕು ಘೋಷಣೆ ಆಗುವುದ ರೊಂದಿಗೆ ತಾಲೂಕು ಆಡಳಿತ ಭವನದ ಅಗತ್ಯವಿದ್ದು, ಹಾಲಿ ಹಳೆಯ ನಾಡ ಕಚೇರಿಯಲ್ಲಿರುವ ತಾಲೂಕು ಕಚೇರಿ ಸ್ಥಳದ ಅಭಾವ ವಿರುವುದರಿಂದ ಈ ಸ್ಥಳಕ್ಕೆ ಐಡಿಎಸ್‌ಎಂಟಿ ಸಭೆ ಅನು ಮೋದನೆ ನೀಡಿದೆ.

ಸದ್ಯದಲ್ಲಿಯೇ ತಾಲೂಕು ಆಡಳಿತ ಭವನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ಜಯವರ್ಧನ್ ತಿಳಿಸಿದ್ದಾರೆ. ಸರ್ವೇ ನಂ. ೬ ರಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ೦.೫೦ ಎಕರೆ ಜಾಗವನ್ನು ಕಾಯ್ದಿರಿಸುವಂತೆ ಕ್ಷೇತ್ರ ಶಾಸಕರಾದ ರಂಜನ್ ಅವರನ್ನು ಕೋರಿರುವ ಹಿನ್ನೆಲೆಯಲ್ಲಿ ೨ ಅಂತಸ್ತುಗಳ ಭವನ ನಿರ್ಮಾಣಕ್ಕೆ ಸರ್ವೆ ನಂ. ೫/೧, ೫/೨ ರಲ್ಲಿ ೦.೨೫ ಎಕರೆ ಜಾಗ ನೀಡುವಂತೆ ಐಡಿಎಸ್‌ಎಂಟಿ ಸಭೆ ತೀರ್ಮಾನ ಕೈಗೊಂಡಿದೆ ಎಂದು ಜಯವರ್ಧನ್ ಮಾಹಿತಿ ನೀಡಿದ್ದಾರೆ. ಗುಂಡುರಾವ್ ಬಡಾವಣೆಯ ಉಳಿದ ಜಾಗವನ್ನು ಪುರಸಭೆಯ ಆಡಳಿತಾತ್ಮಕ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ ಎಂದು ಜಯವರ್ಧನ್ ‘ಶಕ್ತಿ’ಯೊಂದಿಗೆ ಮಾಹಿತಿ ಒದಗಿಸಿದ್ದಾರೆ.

- ಚಂದ್ರಮೋಹನ್