ಚೆಯ್ಯಂಡಾಣೆ, ಜ. ೧೭: ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯ ನಡುವಿನ ಕಡಂಗ ಚೆಯ್ಯಂಡಾಣೆವರೆಗಿನ ೬ ಕಿಲೋ ಮೀಟರ್ ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವ ಸ್ಥಿತಿ ಸೃಷ್ಟಿಯಾಗಿದೆ.

ಪವಿತ್ರ ಸ್ಥಳವಾದ ತಲಕಾವೇರಿ, ಭಾಗಮಂಡಲ,ಎಮ್ಮೆಮಾಡು ದರ್ಗಾ,ಇಗುತ್ತಪ್ಪ ದೇವಸ್ಥಾನ, ನಾಲ್ಕುನಾಡು ಅರಮನೆ, ಚೇಲವಾರ ಜಲಪಾತ, ತಡಿಯಂಡ ಮೊಳ್ ಬೆಟ್ಟ, ಹೀಗೆ ಹಲವಾರು ಪ್ರವಾಸಿ ಹಾಗೂ ಶ್ರದ್ಧಾಕೇಂದ್ರಗಳಿಗೆ ತೆರಳುವ ಮುಖ್ಯ ರಸ್ತೆ ಇದಾಗಿದ್ದು ದೈನಂದಿನ ಸಾವಿರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ಹಲವಾರು ಬಾರಿ ಮಾಧ್ಯಮಗಳಲ್ಲಿ ಈ ರಸ್ತೆಯ ಕುರಿತು ವರದಿಗಳು ಬಂದಿದ್ದರು ಯಾವುದೇ ಸ್ವಂದನ ಇದುವರೆಗೂ ದೊರೆತ್ತಿಲ್ಲ. ನಿನ್ನೆಯಿಂದ ಆರಂಭಗೊAಡಿರುವ (ಪ್ಯಾಚ್‌ವರ್ಕ್) ಕಾಮಗಾರಿ ಕಳಪೆಯಲ್ಲಿ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹೆದ್ದಾರಿಯಾಗಿರುವ ಹಿನ್ನೆಲೆ ರಸ್ತೆ ಕಾಮಗಾರಿಗೆ ಹಣ ಮಂಜೂರಾಗಿದ್ದರೂ, ತೇಪೆ ಹಾಕುವ ಕ್ರಮವನ್ನು ಜನರು ವಿರೋಧಿಸಿದ್ದು, ಹಾಕುತ್ತಿರುವ ತೇಪೆಯೂ ಸರಿ ಇಲ್ಲ. ಕೆಲವು ಗುಂಡಿಗಳನ್ನು ಮಾತ್ರ ಮುಚ್ಚಲಾಗುತ್ತಿದೆ. ಇದು ಅವೈಜ್ಞಾನಿಕ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಪ್ಯಾಚ್ ವರ್ಕ್ ನಿಲ್ಲಿಸಿ ಮರು ಡಾಂಬರೀಕರಣ ಮಾಡಿ ಉತ್ತಮ ರಸ್ತೆ ಕಾಮಗಾರಿ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಅಶ್ರಫ್