ವೀರಾಜಪೇಟೆ, ಜ. ೧೬ : ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ವೀರಾಜಪೇಟೆ ಹೊರವಲಯದ ಐಮಂಗಲ ಗ್ರಾಮದಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ ಗ್ರಾಮದ ರಕ್ಷಿತ್ ಅವರ ಪತ್ನಿ ಕಾವ್ಯ (೨೩) ಮೃತ ದುರ್ದೈವಿ.

ತಾ. ೧೫ ರಂದು ಮನೆಯಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪತಿ ರಕ್ಷಿತ್ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂದಿರುಗಿ ನೋಡಿದಾಗ ಕಾವ್ಯಳು ಅಂಗಾತವಾಗಿ ಬಿದ್ದಿದ್ದು, ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪರೀಕ್ಷೆ ನಂತರದಲ್ಲಿ ಮರಣಹೊಂದಿರುವುದು ದೃಢಪಟ್ಟಿದೆ. ಮೃತಳ ತಂದೆ ವಸಂತ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಸಾವಿಗೆ ನಿಖರ ಮಾಹಿತಿಗಳು ತಿಳಿಯದಾಗಿದ್ದು ಪೊಲೀಸರ ತನಿಖೆಯಿಂದ ಸಾವಿನ ಹಿಂದಿರುವ ಕಾರಣ ತಿಳಿದು ಬರಬೇಕಾಗಿದೆ. ಇಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿ ಮೃತಳ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.