ಸೋಮವಾರಪೇಟೆ, ಜ.೧೬: ರಿವಾಲ್ವಾರ್‌ನಿಂದ ಗುಂಡು ಹಾರಿಸಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗರ್ವಾಲೆ ಗ್ರಾಮದಲ್ಲಿ ನಡೆದಿದೆ.

ಗರ್ವಾಲೆ ಗ್ರಾಮದ ನಾಪಂಡ ಕುಶಾಲಪ್ಪ ಎಂಬವರ ಪುತ್ರ, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜೇಶ್ ಚಂಗಪ್ಪ (೨೮) ಮೃತ ಯುವಕ ಶನಿವಾರ ಮಧ್ಯರಾತ್ರಿ ಬೆಲೆನೋ ಕಾರಿನಲ್ಲಿ ಗರ್ವಾಲೆಗೆ ತೆರಳುತ್ತಿದ್ದ ಸಂದರ್ಭ ಮಾದಾಪುರ ಸಮೀಪದ ಮೂವತ್ತೊಕ್ಲು ಗ್ರಾಮದ ರಸ್ತೆಯಲ್ಲಿ ಕಾರು ಅಪಘಾತವಾಗಿದ್ದು, ಈ ಬಗ್ಗೆ ಮನೆಗೆ ಕರೆ ಮಾಡಿ, ಅಪಘಾತದ ಮಾಹಿತಿ ನೀಡಿದ್ದಾನೆ.

ನಂತರ ಸ್ವಲ್ಪ ದೂರದಲ್ಲಿ ಕಾಫಿ ತೋಟದೊಳಗೆ ತೆರಳಿ ಹಣೆಗೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಮಾಹಿತಿಯಿಲ್ಲದ ಹಿನ್ನೆಲೆ ನಿನ್ನೆ ಬೆಳಿಗ್ಗೆ ಕುಟುಂಬದವರು ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿತ್ತು. ಕಾರು ಅಪಘಾತವಾಗಿರುವ ಸ್ಥಳದ ಸುತ್ತಮುತ್ತ ಸ್ಥಳೀಯರು ಹುಡುಕಾಟ ನಡೆಸಿದ ಹಿನ್ನೆಲೆ ಸಂಜೆ ವೇಳೆಗೆ ಕಾಫಿ ತೋಟದೊಳಗೆ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಭೇಟಿ ನೀಡಿದ್ದಾರೆ. ಅತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯಿಂದ ಸತ್ಯಾಂಶ ತಿಳಿಯಬೇಕಿದೆ.