ಶ್ರೀಮAಗಲ, ಜ. ೧೬: ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿಯಲ್ಲಿ ಚೆಟ್ಟಂಗಡ ಕುಟುಂಬ ಆಯೋಜಿಸಿರುವ ಎರಡನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ನಮ್ಮೆ-೨೦೨೩ ಲಾಂಛನವನ್ನು ನೆಮ್ಮಲೆ ಗ್ರಾಮದಲ್ಲಿರುವ ಚೆಟ್ಟಂಗಡ ಕುಟುಂಬದ ಐನ್‌ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅನಾವರಣಗೊಳಿಸಿದರು.
ಲಾಂಛನ ಬಿಡುಗಡೆ ಮುನ್ನ ಐನ್‌ಮನೆಯಲ್ಲಿ ಕುಟುಂಬದ ಹಿರಿಯರು, ಅತಿಥಿಗಳೊಂದಿಗೆ ಗುರುಕಾರೋಣರಿಗೆ ಕಾರ್ಯಕ್ರಮದ ಯಶಸ್ವಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು.
ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ಸುಜಾ ಕುಶಾಲಪ್ಪ ಅವರು, ೧೯೯೭ರಲ್ಲಿ ಪಾಂಡAಡ ದಿವಂಗತ ಕುಟ್ಟಪ್ಪ ಅವರು ಕೊಡವ ಜನಾಂಗದಲ್ಲಿ ಒಗ್ಗಟ್ಟು ಬೆಸೆಯಲು ಹಾಗೂ ಕುಟುಂಬಗಳನ್ನು ಒಂದೇ ಸ್ಥಳದಲ್ಲಿ ಸೇರಿಸುವ, ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನಕ್ಕಾಗಿ ಕೌಟುಂಬಿಕ ಹಾಕಿ ನಮ್ಮೆಯನ್ನು ಪ್ರಾರಂಭಿಸಿದರು. ನಂತರ ಕ್ರಿಕೆಟ್ ಪಂದ್ಯಾಟವನ್ನು ಸಹ ಕಾರ್ಷನ್ ಕಾರ್ಯಪ್ಪ ಅವರು ಆರಂಭಿಸಿದರು. ಇದು ಜನಪ್ರಿಯವಾಗಿದೆ. ಇದೀಗ ಹಗ್ಗಜಗ್ಗಾಟ ಸ್ಪರ್ಧೆಯನ್ನು ಕಳೆದ ವರ್ಷದಿಂದ ಪೊನ್ನೋಲತಂಡ ಕುಟುಂಬ ಆರಂಭಿಸಿದ್ದು, ೨ನೇ ವರ್ಷದ ಪಂದ್ಯವಳಿಯನ್ನು ಚೆಟ್ಟಂಗಡ ಕುಟುಂಬ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಇದು ಜನಪ್ರಿಯವಾಗಲಿ ಎಂದು ಶುಭ ಹಾರೈಸಿದರು.
ಕೊಡವ ಕುಟುಂಬಗಳು ಪಂದ್ಯಾವಳಿಯನ್ನು ನಡೆಸುವುದು ಹಾಗೂ ಆರ್ಥಿಕ ಕ್ರೋಢೀಕರಣ ಕಷ್ಟವಾಗುವ ಹಿನ್ನೆಲೆಯಲ್ಲಿ ಸರಕಾರದಿಂದ ಅನುದಾನವನ್ನು ಪಡೆಯುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿ ೨೦೧೨ ರಿಂದ ಅನುದಾನ ದೊರೆಯುವಂತಾಗಿದೆ. ಎಲ್ಲಾ ಕೌಟುಂಬಿಕ ಪಂದ್ಯಾವಳಿಗಳು ಮುಂದಿನ ದಿನಗಳಲ್ಲಿ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟ ಮೈದಾನದಲ್ಲಿ ನಡೆಸಲು ಅಗತ್ಯ ಸ್ಟೇಡಿಯಂ ಹಾಗೂ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ಅಗತ್ಯ ಕ್ರಿಯಾಯೋಜನೆ ರೂಪಿಸಲಾಗುವುದು. ಇತರ ಜನಾಂಗಕ್ಕೆ ಇರುವ ಮಠಗಳಂತೆ ಕೊಡವ ಜನಾಂಗಕ್ಕೆ ಕೊಡವ ಸಮಾಜ ಒಕ್ಕೂಟ ಕೇಂದ್ರವನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿ ಪೊನ್ನೋಲತಂಡ ಕಿರಣ್ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲು ಸಾಧ್ಯವಿದೆ. ಕಡಿಮೆ ಸದಸ್ಯರಿರುವ ಕುಟುಂಬಗಳಿಗೆ ಹಾಕಿ ಮತ್ತು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಮತ್ತು ಆಯೋಜಿಸುವುದು ಕಷ್ಟಸಾಧ್ಯ. ಆದ್ದರಿಂದ ಸಣ್ಣ ಕುಟುಂಬಗಳು ಸಹ ಪಂದ್ಯಾವಳಿಯಲ್ಲಿ ಭಾಗವಹಿಸಲು ಮತ್ತು ಆಯೋಜಿಸಲು ಹಗ್ಗಜಗ್ಗಾಟ ಸ್ಪರ್ಧೆಯನ್ನು ಕಳೆದ ವರ್ಷದಿಂದ ಆಯೋಜಿಸಲಾಗಿದೆ ಎಂದು ಹೇಳಿದರು. ಇದಲ್ಲದೆ ಅಲ್ಲುಮಾಡ, ಚಂಗುಲAಡ, ಚಿಯಕಪೂವಂಡ, ಬೊಟ್ಟಂಗಡ ಕುಟುಂಬಗಳು ಸಹ ಮುಂದಿನ ವರ್ಷಗಳಲ್ಲಿ ಪಂದ್ಯಾವಳಿ ನಡೆಸಲು ಈಗಾಗಲೇ ಹೆಸರು ನೋಂದಾಯಿಸಿಕೊAಡಿವೆ ಎಂದು ಹೇಳಿದರು.
ಹಾಕಿ ಅಕಾಡೆಮಿ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೆಟ್ಟಂಗಡ ಕುಟುಂಬದ ಅಧ್ಯಕ್ಷ ವಿಜಯ ಕಾರ್ಯಪ್ಪ, ಕುಟುಂಬ ಆಯೋಜಿಸಿರುವ ಹಗ್ಗಜಗ್ಗಾಟ ಸ್ಪರ್ಧೆಯು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಆರಂಭವಾಗಲಿದೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಸ್ಪರ್ಧೆ ನಡೆಯಲಿದೆ. ಮೊದಲ ಸ್ಥಾನ ಪಡೆಯುವ ಉಭಯ ವಿಭಾಗದ ತಂಡಗಳಿಗೆ ತಲಾ ರೂ. ೫೦ ಸಾವಿರ ಟ್ರೋಫಿ, ಎರಡನೇ ಸ್ಥಾನ ಪಡೆಯುವ ತಂಡಕ್ಕೆ ರೂ. ೩೦ ಸಾವಿರ-ಟ್ರೋಫಿ ಹಾಗೂ ಮೂರನೇ ಸ್ಥಾನ ಪಡೆಯುವ ತಂಡಗಳಿಗೆ ರೂ.೨೦ ಸಾವಿರ-ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು. ಕುಟುಂಬದ ಕಾರ್ಯದರ್ಶಿ ರವಿ ಸುಬ್ಬಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಗ್ರಾಮದ ಚೊಟ್ಟೆಯಾಂಡಮಾಡ, ಕುಂಞAಗಡ, ಮಾಣೀರ, ಬಲ್ಯಾಂಡಮಾಡ, ಚಂಗುಲAಡ, ಬಾದುಮಂಡ, ಬಾನಂಗಡ ಕುಟುಂಬದ ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು. ಇದಲ್ಲದೆ ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ ,ಟಿ-ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಚಂಗುಲAಡ ಸತೀಶ್ ಸೇರಿದಂತೆ ಕುಟುಂಬದ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
ರಮ ಉತ್ತಪ್ಪ ಪ್ರಾರ್ಥಿಸಿ, ವಿಜಯ ಕಾರ್ಯಪ್ಪ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಕಂಬ ಕಾರ್ಯಪ್ಪ ವಂದಿಸಿದರು.