ಸೋಮವಾರಪೇಟೆ, ಜ. ೧೪: ಇಲ್ಲಿನ ಜ್ಞಾನವಿಕಾಸ ಶಾಲೆಯಲ್ಲಿ ವಿವೇಕಾನಂದರ ೧೬೧ನೇ ಜನ್ಮದಿನಾಚರಣೆ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜ್ಞಾನವಿಕಾಸ ಶಾಲೆ ಮತ್ತು ಕೊಡಗು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಭಾಷಣ, ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ನಡೆಯಿತು.
ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ವೆಂಕಟೇಶ್, ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡು ಗೌರವಿಸಿದ ವಿಶ್ವಮಾನವ ವಿವೇಕಾನಂದ ಅವರ ಆದರ್ಶ ಜೀವನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಸ್ವಾತಂತ್ರö್ಯಪೂರ್ವದಲ್ಲೇ ವಿವೇಕಾನಂದ ಅವರು ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದರು. ರಾಮಕೃಷ್ಣ ಮಿಷನ್ ಆರಂಭಿಸುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ಕಾಯಕಕ್ಕೆ ಮುಂದಾದರು ಎಂದು ಹೇಳಿದರು.
ತೀರ್ಪುಗಾರರಾಗಿ ಆಗಮಿಸಿದ್ದ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರುಗಳಾದ ಎಂ.ಎಸ್. ಸುನಿಲ್, ದೇವರಾಜು ಅವರುಗಳನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಕೆ. ಲಕ್ಷಿö್ಮ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ತೇಲಪಂಡ ಕವನ್ ಕಾರ್ಯಪ್ಪ, ಸದಸ್ಯ ದುಷ್ಯಂತ್‌ಕುಮಾರ್ ಉಪಸ್ಥಿತರಿದ್ದರು. ಪಟ್ಟಣ ಹಾಗೂ ಸುತ್ತಮುತ್ತಲಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.